ರೈತರು ಸಂಘಟಿತರಾಗಿ ಕಾರ್ಯ ನಿರ್ವಹಿಸಿ :ಡಾ ಅಶೋಕ ದಳವಾಯಿ

ಸಂಜೆವಾಣಿ ವಾರ್ತೆ,
ವಿಜಯಪುರ ಜ. ೭: ರೈತರು ಕೇವಲ ಒಬ್ಬೊಬ್ಬರಾಗಿ ವ್ಯವಸಾಯ ಮಾಡುವ ಬದಲು ಸಂಘಟನಾತ್ಮಕವಾಗಿ ಕೆಲಸ ಮಾಡಿದಲ್ಲಿ, ಉತ್ಪಾದನೆ ವೆಚ್ಚದಲ್ಲಿ ಕಡಿಮೆಯಾಗಿ, ಅಧಿಕ ಲಾಭ ಗಳಿಸಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ ದಳವಾಯಿ ಹೇಳಿದರು.
ನಗರ ಹೊರ ವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಜರುಗಿದ ಕೃಷಿ ಮೇಳದಲ್ಲಿ ಲಿಂಬೆನಾಡು ರೈತ ಉತ್ಪಾದಕ ಸಂಸ್ಥೆಗೆ ಅಧಿಕೃತವಾಗಿ ಚಾಲನೆ ನೀಡುವುದರ ಮೂಲಕ ಮಾತನಾಡಿದರು.
ರೈತರು ಕೇವಲ ಒಂದೇ ಬೆಳೆ, ಒಂದೇ ಪದ್ಧತಿ ಅನುಸರಿಸದೇ ಸಮಗ್ರ, ಸಾವಯವ, ಸುಸ್ಥಿರ ಕೃಷಿ ಪದ್ಧತಿ, ಅಳವಡಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ಡಾ. ಪಿ. ಎಲ್. ಪಾಟೀಲ್ ಅವರು ಮಾತನಾಡಿ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ಸದಸ್ಯತ್ವ ಹೊಂದಿ, ಪಾಲುದಾರರಾಗಬೇಕು. ಬೆಳೆ ಬೆಳೆಯುವುದರ ಜೊತೆಗೆ ಸಂಸ್ಕರಣೆ, ಮೌಲ್ಯವರ್ಧನೆ, ಮಾಡಿ ಬ್ರಾಂಡ್ ಮೂಲಕ ಮಾರಾಟ ಮಾಡಿ ಅಧಿಕ ಲಾಭ ಗಳಿಸಬೇಕೆಂದರು.
ಜಂಟಿ ಕೃಷಿ ನಿರ್ದೇಶಕ ಡಾ. ಶಿವನಗೌಡ ಪಾಟೀಲ ಅವರು ಮಾತನಾಡಿ, ರೈತ ಉತ್ಪಾದನಾ ಕಂಪನಿಗಳಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಕೊಡಲಾಗುತ್ತಿದ್ದು, ಅದರ ಲಾಭವನ್ನು ರೈತರೆಲ್ಲರೂ ಪಡೆದುಕೊಂಡು ಎಲ್ಲಾ ನಿರ್ದೇಶಕರು ತಮ್ಮನ್ನು ಹೆಚ್ಚೆಚ್ಚು ತೊಡಗಿಸಿಕೊಂಡು, ರೈತರ ಶೇರನ್ನು ಪಡೆದು, ಅವರಿಗೆ ವೈಜ್ಞಾನಿಕ ಮಾಹಿತಿ ನೀಡಿ, ಪ್ರತಿಯೊಬ್ಬರು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಈ ಸಂದರ್ಭದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸೆ ಪಾರ್ವತಿ ಕುರ್ಲೆ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ. ಪಿ.ಯು.ಕೃಷ್ಣರಾಜ ಡಾ. ಎಂ.ವಿ ಮಂಜುನಾಥ್, ಡಾ. ಎಸ್. ಬಿ. ಜಗ್ಗಿನವರ ಹಾಗೂ ಲಿಂಬೆನಾಡು ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರಾದ ಸಂಗಮೇಶ ಸಗರ, ಎಸ್. ಟಿ. ಪಾಟೀಲ್, ಡಾ. ರವೀಂದ್ರ ಬೆಳ್ಳಿ, ವೀರಣ್ಣ ಸಜ್ಜನ ಸೇರಿದಂತೆ ಅಪಾರ ಸಂಖ್ಯೆಯ ರೈತ ಬಾಂಧವರು ವಿವಿಧ ಇಲಾಖೆ ಅಧಿಕಾರಿಗಳು, ಆಮಂತ್ರಿತರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.