ಕಬ್ಬಿಗೆ ಬೆಂಬ ಬೆಲೆ ಆಗ್ರಹಿಸಿ ಅಹೋರಾತ್ರಿ ರೈತರ ಪ್ರತಿಭಟನೆ

ಬಿವೈವಿ ಭಾಗಿ

ಬೆಳಗಾವಿ, ನ. ೫- ಪ್ರತಿ ಟನ್ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಅಹೋ ರಾತ್ರಿ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಂಡು ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.


ಮೂಡಲಗಿರಿ ತಾಲ್ಲೂಕಿನ ಗುರ್ಲಾಪುರ ಗ್ರಾಮದಲ್ಲಿ ರೈತರು ಕೊರೆಯುವ ಚಳಿಯನ್ನು ಲೆಕ್ಕಿಸದೆ ಅಹೋರಾತ್ರಿ ನಡೆಸುತ್ತಿರುವ ಪ್ರತಿಭಟನೆ ೭ನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಿ.ವೈ. ವಿಜಯೇಂದ್ರ ತಮ್ಮ ಹುಟ್ಟುಹಬ್ಬದ ನಡುವೆಯೂ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲೇ ರೈತರು ವಿಜಯೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.


ಪ್ರತಿಭಟನೆ ನಡೆಸುತ್ತಿರುವ ವೇದಿಕೆಯ ಮೇಲೆ ವಿಜಯೇಂದ್ರ ಮಲಗಿದ್ದರು. ಮಧ್ಯ ರಾತ್ರಿ ಅವರನ್ನು ಎಬ್ಬಿಸಿ ಜನ್ಮದಿನದ ಶುಭಾಶಯ ಕೋರಿದರು.


ಪ್ರತಿಭಟನೆಯ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ೬ ದಿನಗಳಿಂದ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಯಾವುದೇ ಪ್ರಯೋಜನವಾಗಿಲ್ಲ. ರೈತರ ಹೋರಾಟವನ್ನು ಹಗುರವಾಗಿ ಪರಿಗಣಿಸಬೇಡಿ ಎಂದರು.


ಗುರ್ಲಾಪುರದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ರಾಜ್ಯದಾದ್ಯಂತ ಹಬ್ಬುತ್ತಿದೆ. ಎಲ್ಲಾ ತಾಲ್ಲೂಕುಗಳಲ್ಲೂ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಪರಿಸ್ಥಿತಿ ಕೈ ಮೀರುವ ಮುನ್ನ ಸರ್ಕಾರದ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಇಂದು ಸಚಿವರು ರೈತರೊಂದಿಗೆ ಮಾತುಕತೆ ನಡೆಸುತ್ತಾರೆ ಎಂಬ ಮಾಹಿತಿಯಿದೆ. ಏನಾಗೋತ್ತಾದೋ ನೋಡೋಣ ಎಂದರು.


ವಾಸ್ತವ್ಯವಿರಬೇಕೆಂಬ ಆಲೋಚನೆ ಇರಲಿಲ್ಲ. ಆದರೆ ಉರಿಬಿಸಿಲಿನಲ್ಲೂ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಗಮನಿಸಿ, ಹೋರಾಟಕ್ಕೆ ಬೆಂಬಲ ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡುವುದಾಗಿ ತಿಳಿಸಿದರು.