Home ಜಿಲ್ಲೆ ಕಲಬುರಗಿ ರೈತರು ಬರದ ಭಯದಿಂದ ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ: ನಾಲವಾರ ಶ್ರೀ

ರೈತರು ಬರದ ಭಯದಿಂದ ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ: ನಾಲವಾರ ಶ್ರೀ

ನಾಲವಾರ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಆಯುಧಪೂಜೆಯ ಪುಣ್ಯದಿನದಂದು ಮಠದ ಪೀಠಾಧಿಪತಿ ಪರಮಪೂಜ್ಯ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮವಧರ್ಂತಿ ಮಹೋತ್ಸವ ಹಾಗೂ ಮಠದ ಹಿಂದಿನ ಗುರುಗಳಾದ ಲಿಂ. ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವವನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ ಅದ್ಧೂರಿಯಾಗಿ ಆಚರಿಸಲಾಯಿತು.

ಆಯುಧಪೂಜೆಯ ರಾತ್ರಿ ಲಿಂ. ತೋಟೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಮಠದ ಆವರಣದಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ವಧರ್ಂತಿ ಮಹೋತ್ಸವ ಕಾರ್ಯಕ್ರಮ ಜರುಗಿತು.

ರೈತರಿಗೆ ಶ್ರೀಗಳ ಆತ್ಮಸ್ಥೈರ್ಯದ ಸಂದೇಶ

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಬರಗಾಲದ ಆತಂಕ ಎದುರಿಸುತ್ತಿರುವ ರೈತರು ಧೈರ್ಯ ಕಳೆದುಕೊಳ್ಳಬಾರದು ಎಂದು ಕರೆ ನೀಡಿದರು.

“ನಾಡಿನ ರೈತರು ಬರಗಾಲಕ್ಕೆ ಹೆದರಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಭಗವಂತ ನಮ್ಮೊಂದಿಗಿದ್ದಾನೆ ಎಂಬ ದೃಢ ನಂಬಿಕೆಯಿಂದ ಮುನ್ನಡೆದಾಗ ಆತಂಕಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ಮುಂಗಾರು ಮಳೆ ಕೈಕೊಟ್ಟು ಭೂಮಿ ಬರಡಾಗಿದೆ. ಹಿಂಗಾರು ಮಳೆಯಾದರೂ ಉತ್ತಮವಾಗಿ ಸುರಿದು ಧರೆಯನ್ನು ತಣಿಸಲಿ ಎಂದು ಎಲ್ಲರೂ ಸೇರಿ ಭಗವಂತನಲ್ಲಿ ಪ್ರಾರ್ಥಿಸೋಣ,” ಎಂದು ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿದರು.

ಗಣ್ಯರ ಉಪಸ್ಥಿತಿ, ಭಕ್ತರ ಸಮಾಗಮ

ಕಾರ್ಯಕ್ರಮದ ನೇತೃತ್ವವನ್ನು ಮುದನೂರಿನ ಶ್ರೀ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಸೂಗೂರಿನ ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು ಹಾಗೂ ಚಟ್ನಳ್ಳಿಯ ವಿಶ್ವಾರಾಧ್ಯ ಸ್ವಾಮಿಗಳು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಯಾದಗಿರಿ ಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಸಂಗಾರೆಡ್ಡಿಗೌಡ ಮಲ್ಹಾರ, ಸಾಯಿನಾಥ್ ಇಂಜಿನಿಯರ್, ಮಹೇಶ ಸ್ವಾಮಿ ಚಿಂಚೋಳಿ, ಪ್ರದೀಪ ಪುರಾಣಿಕ, ಬೆಂಗಳೂರಿನ ಶಿವಲಿಂಗ ಭೀಮನಹಳ್ಳಿ, ಶ್ರೀಕಾಂತಗೌಡ ಮಡ್ನಾಳ ಹಾಗೂ ಇಬ್ರಾಹಿಂಪುರ ಮಠದ ಭಕ್ತ ಮಹಾದೇವ ಗಂವ್ಹಾರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಗುರುಗಳ ಆಶೀರ್ವಾದ ಪಡೆದರು.

ಗಂಗಾರತಿ, ಭಜನೆ, ನೃತ್ಯ ಕಾರ್ಯಕ್ರಮಗಳ ಮೆರುಗು

ವೇ.ಮೂ. ಮಂಜುನಾಥ ಶಾಸ್ತ್ರಿ ಅವರ ನೇತೃತ್ವದ ವೈದಿಕ ತಂಡದಿಂದ ನಡೆದ ಉತ್ತರ ಭಾರತದ ಪ್ರಸಿದ್ಧ ಗಂಗಾರತಿ ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಭಾವವನ್ನು ಹೆಚ್ಚಿಸಿತು. ಮಹಾರಾಷ್ಟ್ರದ ವಾರ್ಕರಿ ಸಂಪ್ರದಾಯದ ವಿಶೇಷ ಭಜನಾ ಮೇಳವು ಗಮನ ಸೆಳೆಯಿತು.

ಕು. ಈಶಾ ಪಡಶೆಟ್ಟಿ ತಂಡ, ಕು. ಪ್ರತೀಕಾ ಚಿತ್ತಾಪುರ ಹಾಗೂ ನಿತ್ಯಶ್ರೀ ಪಾಟೀಲ ಅವರಿಂದ ಭರತನಾಟ್ಯ ಸೇರಿದಂತೆ ವಿವಿಧ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಪತ್ರಕರ್ತ ಡಾ. ಸಿದ್ಧರಾಜರೆಡ್ಡಿ ಯಾದಗಿರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

ನೂತನ ಒಳಾಂಗಣ ಪ್ರಾಕಾರ ನಿರ್ಮಾಣಕ್ಕೆ ಚಾಲನೆ

ಶ್ರೀಮಠದ ಅಭಿವೃದ್ಧಿಯ ಮುಂದಿನ ಹೆಜ್ಜೆಯಾಗಿ ನೂತನ ಒಳಾಂಗಣ ಪ್ರಾಕಾರದ ನಿರ್ಮಾಣ ಕಾಮಗಾರಿಗೆ ಪೂಜ್ಯರ ಸಮ್ಮುಖದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಧಾರ್ಮಿಕ ವಿಧಿವಿಧಾನಗಳು, ಗುರುಗಳ ಆಶೀರ್ವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಹೋತ್ಸವವು ಭಕ್ತಿಭಾವದಿಂದ ಸಂಪನ್ನಗೊಂಡಿತು.