ಪ್ರಧಾನಮಂತ್ರಿ ಜಲಸಿಂಚಾಯಿ ಯೋಜನೆ ಪೂರ್ಣಗೊಳಿಸಲು, ತೊಗರಿಗೆ ಕ್ವಿಂಟಾಲಿಗೆ 10 ಸಾವಿರ ಬೆಲೆ ನೀಡಲು ರೈತರ ಆಗ್ರಹ

ಆಳಂದ:ಜ.24: ತಾಲೂಕಿನ ತಡೋಳಾ ಗ್ರಾಮದಲ್ಲಿ ಜಾರಿಗೊಳಿಸಿರುವ ಪ್ರಧಾನಮಂತ್ರಿ ಜಲಸಿಂಚಾಯಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ತೊಗರಿಗೆ ಪ್ರತಿ ಕ್ವಿಂಟಾಲಿಗೆ ₹10 ಸಾವಿರ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಘಟಕದ ಆಶ್ರಯದಲ್ಲಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕ ಕಚೇರಿಯ ಎದುರು ಸೋಮವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಹಾಗೂ ಸಹಾಯಕ ಪ್ರಭಾರಿ ಕೃಷಿ ನಿರ್ದೇಶಕ ಬನಸಿದ್ದ ಬಿರಾದಾರ ಅವರು, ಸ್ಥಳೀಯ ಮಟ್ಟದ ಬೇಡಿಕೆಗಳನ್ನು ಈಡೇರಿಸಲಾಗುವುದು ಹಾಗೂ ಉಳಿದ ಬೇಡಿಕೆಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿ, ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಅನಿರ್ದಿμÁ್ಟವಧಿ ಧರಣಿಯನ್ನು ತಾತ್ಕಾಲಿಕವಾಗಿ ಒಂದು ದಿನಕ್ಕೆ ಹಿಂದಕ್ಕೆ ಪಡೆಯಲಾಯಿತು.
ಈ ವೇಳೆ ಮಾತನಾಡಿದ ಕಿಸಾನ್ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಅವರು, ಕಳೆದ ಐದು ವರ್ಷಗಳಿಂದ ಪ್ರಧಾನಮಂತ್ರಿ ಜಲಸಿಂಚಾಯಿ ಯೋಜನೆಯಡಿ ತಡೋಳಾ ಗ್ರಾಮದಲ್ಲಿ ಪ್ರಾರಂಭಗೊಂಡ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. 2021-22ರಲ್ಲಿ ಆರಂಭವಾದ ಯೋಜನೆಯ ನಿಗದಿತ ಕಾಮಗಾರಿಗಳು ವಿಳಂಬವಾಗಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
ಯೋಜನೆಯಡಿ ಬಂದಿರುವ ಹಲವು ಕೃಷಿ ಉಪಕರಣಗಳನ್ನು ರೈತರಿಗೆ ವಿತರಿಸದೇ ಕಾಲಹರಣ ಮಾಡಲಾಗುತ್ತಿದೆ. ಅಲ್ಲದೆ, ತಡೋಳಾ ಗ್ರಾಮ ಪಂಚಾಯಿತಿಗೆ ಸಂಬಂಧವಿಲ್ಲದ ರೀತಿಯಲ್ಲಿ ಕೆಲಸಗಳು ನಡೆಯುತ್ತಿದ್ದು, ಸಂಚಯಿತಿ ಅನುμÁ್ಠನ ಸಮಿತಿಯನ್ನು ಪುನರ್‍ರಚಿಸಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಲಬುರಗಿ ಜಿಲ್ಲೆ ತೊಗರಿ ಬೆಳೆಗಾಗಿ ಪ್ರಸಿದ್ಧವಾಗಿದ್ದರೂ, ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ ರೂಪಾಯಿ 7,000ಕ್ಕೆ ಮಾತ್ರ ತೊಗರಿ ಮಾರಾಟವಾಗುತ್ತಿದೆ. ಸರ್ಕಾರವು 8,000 ಬೆಲೆ ನಿಗದಿಪಡಿಸಿದ್ದರೂ ಖರೀದಿ ಕೇಂದ್ರಗಳು ಇನ್ನೂ ಆರಂಭವಾಗಿಲ್ಲ. ಇದರಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ ಎಂದು ಮೌಲಾ ಮುಲ್ಲಾ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಪ್ರತಿ ಕ್ವಿಂಟಾಲಿಗೆ ರೂಪಾಯಿ 1,000 ಸಹಾಯಧನ ನೀಡಿ, ಒಟ್ಟು 10,000 ಬೆಲೆಯಲ್ಲಿ ತೊಗರಿ ಖರೀದಿಸಬೇಕು ಎಂದು ಅವರು ಆಗ್ರಹಿಸಿದರು. ಜೊತೆಗೆ ಮೈಕ್ರೋ ಫೈನಾನ್ಸ್ ಸಾಲಗಾರರು ಭಯಭೀತರಾಗಿ ವಲಸೆಗೆ ತೆರಳುತ್ತಿರುವುದರಿಂದ, ಸಾಲಗಾರರು ಹಾಗೂ ಹಣಕಾಸು ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.
ಕೃಷಿ ಇಲಾಖೆಯಿಂದ ದೊರೆಯುತ್ತಿರುವ ಹನಿ ನೀರಾವರಿ ಸೌಲಭ್ಯಗಳು ಸೇರಿದಂತೆ ಇತರೆ ಕೃಷಿ ಸಾಮಗ್ರಿಗಳನ್ನು ಸಂಪೂರ್ಣವಾಗಿ ಒದಗಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಿಸಾನ್ ಸಭಾ ತಾಲೂಕು ಉಪಾಧ್ಯಕ್ಷೆ ಕಲ್ಯಾಣಿ ಅವುಟೆ, ತಾಲೂಕು ಉಪಾಧ್ಯಕ್ಷ ರಾಜಶೇಖರ ಬಸ್ಮೆ ಹಿರೋಳಿ, ಮಹಾದೇವ ಪೂಜಾರಿ, ತುಕಾರಾಮ ಕುಂಬಾರ, ರಮೇಶ ಅವುಟೆ, ಫಕ್ರುದ್ದೀನ್ ಗೋಳಾ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.