ಮರಗಿಡಗಳ ಪರಿಹಾರಕ್ಕೆ ರೈತ ಸಂಘ ಎಚ್ಚರಿಕೆ

ಕೋಲಾರ, ಮೇ.೨೬- ಜಿಲ್ಲಾಧಿಕಾರಿಗಳ ಆದೇಶದಂತೆ ಚಿತ್ತೂರು ಪಿ.ಡಿ ಖಾತೆಯಲ್ಲಿರುವ ಗಡಿಭಾಗದ ಚುಕ್ಕನಹಳ್ಳಿ ರೈತರ ೧ ಕೋಟಿ ೧೭ ಲಕ್ಷ ಮರಗಿಡಗಳ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಎನ್.ಹೆಚ್.ಎ.ಐ ಅಧಿಕಾರಿಗಳನ್ನು ಒತ್ತಾಯಿಸಿದರು.


೪೮ ಗಂಟೆಯೊಳಗೆ ಗಡಿಭಾಗದ ನೊಂದ ರೈತರ ೨ನೇ ಕಂತಿನ ಹಣವನ್ನು ಚಿತ್ತೂರು ಪಿ.ಡಿ ಬಿಡುಗಡೆ ಮಾಡದೇ ಇದ್ದರೆ ಮೇ.೩೦ ರ ಶುಕ್ರವಾರ ರಾತ್ರಿ ೧೨ ಗಂಟೆಯಿಂದ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ಗುತ್ತಿಗೆದಾರರಿಗೆ ಅಧಿಕಾರಿಗಳಿಗೆ ನೀಡಿದರು.


ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ದಿಗೆ ಭೂ ಸ್ವಾಧಿನ ಮಾಡಿಕೊಂಡಿರುವ ಗಡಿಭಾಗದ ೧೧ ಜನ ರೈತರಿಗೆ ಭೂ ಪರಿಹಾರ ಅತಿ ಕಡಿಮೆ ಅಂದರೆ ಎಕರೆಗೆ ೩ ಲಕ್ಷ ೮೦ ಸಾವಿರ ವಿತರಣೆ ಮಾಡಿ ಗಡಿಭಾಗದ ರೈತರನ್ನು ನಿರ್ಲಕ್ಷೆ ಮಾಡಿರುವ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ಕನಿಷ್ಠ ಮರಗಿಡಗಳ ಪರಿಹಾರವನ್ನಾದರೂ ಬಿಡುಗಡೆ ಮಾಡಿ ಎಂದರೆ ಚಿತ್ತೂರು ಪಿ.ಡಿ ಕಾರ್ತಿಕ್‌ರೆಡ್ಡಿರವರು ಗಡಿಭಾಗದ ರೈತರನ್ನು ಶೋಷಣೆ ಮಾಡುವ ಜೊತೆಗೆ ನಿರ್ಲಕ್ಷೆ ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.


ಮೊದಲನೇ ಮರಗಿಡಗಳ ಪರಿಹಾರವನ್ನು ಹಿಂದಿನ ಜಿಲ್ಲಾಧಿಕಾರಿ ಆಕ್ರಂ ಪಾಷ ರವರು ೧೦ ಕೋಟಿ ಬಿಡುಗಡೆ ಮಾಡಿ ನೊಂದ ರೈತರ ಸಮಸ್ಯೆಗೆ ಸ್ಪಂದಿಸಿದರು. ಆನಂತರ ಉಳಿದ ೧ ಕೋಟಿ ೧೭ ಲಕ್ಷ ಚಿತ್ತೂರು ಪಿ.ಡಿ ಖಾತೆಯಲ್ಲಿದ್ದು, ಬಿಡುಗಡೆ ಮಾಡಿ ಎಂದರೆ ರೈತರು ಅಧಿಕಾರಿಗಳನ್ನು ಕೈಕಟ್ಟಿಕೊಂಡು ಲಂಚ ನೀಡಿ ಹೆಚ್ಚುವರಿ ಮರಗಿಡಗಳನ್ನು ಬರೆಸಿಕೊಂಡಿದ್ದಾರೆಂದು ೩ ವರ್ಷದಿಂದ ಹಣ ಬಿಡುಗಡೆ ಮಾಡದೆ ರೈತ ವಿರೋದಿ ದೋರಣೆ ಅನುಸರಿಸುತ್ತಿದ್ದಾರೆಂದು ಕಿಡಿ ಕಾರಿದರು.


ನೊಂದ ಪರಿಹಾರ ವಂಚಿತ ರೈತ ರಾಜಣ್ಣ ಮತ್ತು ವಿಶ್ವನಾಥ್ ಮಾತನಾಡಿ ಚಿತ್ತೂರು ಪಿ.ಡಿ ಖಾತೆಯಲ್ಲಿರುವ ೨ನೇ ಕಂತಿನ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಕೈ ಮುಗಿದು ಬೇಡಿದರೂ ಮನಸ್ಸು ಕರಗದ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸನ್ನು ದಾಖಲು ಮಾಡಿಕೊಂಡಿದ್ದು ರೈತರ ಕಷ್ಟವನ್ನು ಅರಿತಿರುವವರ ಹಾಗೂ ಗಡಿಭಾಗದ ನೊಂದ ರೈತರಿಗೆ ಅನ್ಯಾಯ ಆಗಬಾರದೆಂದು ಮೊದಲನೇ ಕಂತು ಬಿಡುಗಡೆ ಮಾಡಿದಂತೆ ೨ನೇ ಕಂತನ್ನು ಕೂಡಲೇ ಸಂಬಂಧಪಟ್ಟ ವಿಶೇಷ ಭೂಸ್ವಾಧಿನಾಧಿಕಾರಿಗಳ ಖಾತೆಗೆ ವರ್ಗಾವಣೆ ಮಾಡಿ ನೊಂದ ರೈತರಿಗೆ ಪರಿಹಾರ ವಿತರಣೆ ಮಾಡಿ ಎಂದು ಆದೇಶ ಮಾಡಿದ್ದರೂ ಚಿತ್ತೂರು ಪಿ.ಡಿ ಯಾವುದೇ ಪ್ರತ್ಯತ್ತರ ನೀಡದೇ ಇರುವುದನ್ನು ಖಂಡಿಸಿದರು.


ಜಿಲ್ಲಾಧಿಕಾರಿಗಳ ಆದೇಶದಂತೆ ೪೮ ಗಂಟೆಯಲ್ಲಿ ಹಣ ಬಿಡುಗಡೆ ಮಾಡಿ ಇಲ್ಲವಾದರೆ ಪರಿಹಾರ ಸಿಗುವವರೆಗೂ ರಸ್ತೆ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ಚಿತ್ತೂರು ಪಿ.ಡಿ ರವರಿಗೆ ನೀಡಿದರು.


ಪತ್ರಿಕಾ ಹೇಳಿಕೆ ನೀಡುವಾಗ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮೀಸೆ ವೆಂಕಟೇಶಪ್ಪ, ನಟರಾಜ್, ಕುಮಾರ್, ನಾರಾಯಣಸ್ವಾಮಿ, ಪುತ್ತೇರಿ ರಾಜು, ಬಾಬು ಮುಂತಾದವರಿದ್ದರು.