ನಕಲಿ ವೈದ್ಯರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಗೆ ರೈತ ಸಂಘ ಆಗ್ರಹ

ಬಂಗಾರಪೇಟೆ,ನ.೨೪- ಗಡಿಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾಣೆಯಾಗಿರುವ ವೈದ್ಯರನ್ನು ಹುಡುಕಿಕೊಟ್ಟು ನಕಲಿ ವೈದ್ಯರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಗಡಿಭಾಗದ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ರೈತ ಕೂಲಿ ಕಾರ್ಮಿಕರ ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ನಗರ ಆಸ್ಪತ್ರೆಯ ವೈದ್ಯರಾದ ಭಾರತಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.


ಲಕ್ಷ ಲಕ್ಷ ಸಂಬಳ ಪಡೆದು ಗ್ರಾಮೀಣ ರೈತ ಕೂಲಿ ಕಾರ್ಮಿಕರ ಸೇವೆ ಮಾಡಬೇಕಾದ ಸರ್ಕಾರಿ ವೈದ್ಯರು ಗಡಿಭಾಗದ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ನಾಪತ್ತೆ ಆಗಿದ್ದು, ಚಿಕಿತ್ಸೆಗಾಗಿ ತಮಿಳುನಾಡು ಆಂದ್ರ ಮೂಲದ ವೈದ್ಯಕೀಯ ಗಂದ ಗಾಳಿ ಗೊತ್ತಿಲ್ಲದ ನಕಲಿ ವೈದ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದ್ದರೂ ನಿರ್ಲಕ್ಷೆ ಮಾಡುವ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಹಾಗೂ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕಾದ ಜಿಲ್ಲಾ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ನಾಪತ್ತೆ ಆಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಸ್ಪತ್ರೆಗಳ ಅವ್ಯವಸ್ಥೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.


ಎಲ್ಲಾ ಆರೋಗ್ಯ ಕೇಂದ್ರಗಳೂ ಕೋಟಿ ಕೋಟಿ ಅನುದಾನದಲ್ಲಿ ತಾಜ್‌ಮಹಲ್‌ನ್ನು ಮೀರಿಸುವ ಕಟ್ಟಡಗಳು ಅಭಿವೃದ್ದಿ ಆಗಿವೆ. ಆದರೆ ಆಸ್ಪತ್ರೆಯಲ್ಲಿರುವ ಮೂಲಭೂತ ಸೌಕರ್ಯಗಳನ್ನು ಸಲಕರಣೆಗಳನ್ನು ಉಪಯೋಗಿಸಿಕೊಂಡು ಬಡವರಿಗೆ ಉತ್ತಮ ಸೇವೆ ಮಾಡಬೇಕಾದ ವೈದ್ಯರು ಸಿಬ್ಬಂದಿ ರೋಗಿಗಳ ಜೊತೆ ಬೇಜವಬ್ದಾರಿ ವರ್ತನೆಯ ಜೊತೆಗೆ ತುರ್ತು ಸಮಯದಲ್ಲೂ ಯಾವುದೇ ಚಿಕಿತ್ಸೆ ನೀಡದೆ ವಂಚನೆ ಮಾಡುವ ಮೂಲಕ ತಮ್ಮ ವೃತ್ತಿಗೆ ದ್ರೋಹ ಮಾಡುವ ಜೊತೆಗೆ ವೈದ್ಯಕೀಯ ಸೇವೆಗೆ ಅಪಮಾನ ಮಾಡುತ್ತಿದ್ದಾರೆಂದು ವೈದ್ಯರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.


ತಾಲ್ಲೂಕಾದ್ಯಕ್ಷ ಕದರಿನತ್ತ ಅಪ್ಪೋಜಿರಾವ್ ಮಾತನಾಡಿ ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿರುವ ಕಾಮಸಮುದ್ರ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೈತ ಕೂಲಿ ಕಾರ್ಮಿಕರ ಪಾಲಿಗೆ ಇದ್ದು ಇಲ್ಲದಂತಾಗಿವೆ. ತುರ್ತು ಪರಿಸ್ಥಿತಿಗಳಾದ ಹೆರಿಗೆ, ಅಪಘಾತ, ಜ್ವರ, ಹಾಗೂ ಮಕ್ಕಳಿಗೆ ತೊಂದರೆ ಆದಾಗ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದರೆ ಕನಿಷ್ಠ ರೋಗಿಯನ್ನು ಮುಟ್ಟದೆಯೇ ಅಲ್ಲಿನ ಸಿಬ್ಬಂದಿ ಹಾಗೂ ವೈದ್ಯರು ನಿರ್ಲಕ್ಷೆ ಮಾಡಿ ಕಾಂಪೌಂಡರ್ ಕೈಯಲ್ಲಿ ಮೂರು ಮಾತ್ರೆಗಳನ್ನು ರೋಗಿಗೆ ಬಿಸಾಕಿ ಏನಾಗಿದೆ ಎಂದು ಕೇಳದ ಕೀಳು ಮಟ್ಟಕ್ಕೆ ಅಲ್ಲಿನ ಸಿಬ್ಬಂದಿ ನಡೆದುಕೊಳ್ಳುವ ಜೊತೆಗೆ ಪ್ರತಿ ನಿತ್ಯ ಮೊಬೈಲ್‌ಗಳಲ್ಲಿ ತಲ್ಲೀನರಾಗಿದ್ದರೂ ಕ್ರಮ ಕೈಗೊಳ್ಳಬೇಕಾದ ಹಿರಿಯ ಅಧಿಕಾರಿಗಳು ಮೌನವೇಕೆ ಎಂದು ಪ್ರಶ್ನೆ ಮಾಡಿದರು.


ಸರ್ಕಾರ ಆಸ್ಪತ್ರೆಗಳ ಅವ್ಯವಸ್ಥೆ ವೈದ್ಯರ ನಿರ್ಲಕ್ಷವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ನಕಲಿ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಕ್ಲೀನಿಕ್‌ಗಳನ್ನು ತೆರೆದು ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಜೊತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ , ಚರಂಡಿ, ಬೀದಿ ದೀಪಗಳಿಲ್ಲದ ಜೊತೆಗೆ ನಿರಂತರವಾಗಿ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಗಡಿಭಾಗದ ರೈತ ಕೂಲಿ ಕಾರ್ಮಿಕರ ಆರೋಗ್ಯದ ಬಗ್ಗೆ ನಿರ್ಲಕ್ಷೆವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ವಿರುದ್ದ ಕ್ರಮ ಕೈಗೊಳ್ಳುವ ಮುಖಾಂತರ ಗಡಿಭಾಗದ ರೈತರ ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ಮನವಿ ಮೂಲಕ ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ವೈದ್ಯರಾದ ಭಾರತಿರವರು ನಿಮ್ಮ ಮನವಿಯನ್ನು ಹಿರಿಯ ವೈದ್ಯರ ಗಮನಕ್ಕೆ ತಂದು ನಿರ್ಲಕ್ಷೆವಹಿಸುವ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.