
ಬೀದರ:ನ.5:ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಬೀದರ ಕಚೇರಿಗೆ ಕಳೆದ 25 ದಿನಗಳಿಂದ ಬೀಗ ಹಾಕಿರುವ ಘಟನೆಗೆ ಸಂಬಂಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ – ಬೀದರ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಕಚೇರಿಗೆ ಬೀಗ ಹಾಕಿರುವುದು ಕ್ಷೇತ್ರ ವ್ಯವಸ್ಥಾಪಕ ಅನೀತಾ ತಂದೆ ಪುಂಡಲಿಕ ಅವರ ಕ್ರಮವಾಗಿದೆ. ಅವರು ಬೀಗ ಹಾಕಿರುವ ಕಾರಣವಾಗಿ ರೈತರಿಗೆ ಬರುವ ಅನುದಾನ, ಬೀಜ, ಔಷಧಿ, ಯಂತ್ರೋಪಕರಣಗಳ ದುರುಪಯೋಗ ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ತಾನು ಹೋರಾಡುತ್ತಿರುವುದರಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ.
ರೈತರು ಈಗಾಗಲೇ ಬರಗಾಲ ಮತ್ತು ಅತಿವೃಷ್ಟಿಯಿಂದ ನಷ್ಟ ಅನುಭವಿಸುತ್ತಿದ್ದು, ರಬ್ಬಿ ಬಿತ್ತನೆ ಸಮಯದಲ್ಲಿ ಕೃಷಿ ವಿಜ್ಞಾನಿಗಳಿಂದ ಮಾರ್ಗದರ್ಶನ ಅಗತ್ಯವಾಗಿದೆ. ಆದರೆ ಕಚೇರಿ ಮುಚ್ಚಿರುವುದರಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಇದರ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಬೀಗ ತೆರೆಯಿಸಿ, ಕ್ಷೇತ್ರ ವ್ಯವಸ್ಥಾಪಕರ ಆರೋಪಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಒತ್ತಾಯಿಸಿ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರ.ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಶ್ರೀಮಂತ ಬಿರಾದಾರ, , ವೆಂಕಟರಾವ ವಲ್ಲಪೆ, ವೈಜಿನಾಥ ಬುಯ್ಯಾ ಮತ್ತು ಶಂಕರಪ್ಪ ಉಪಸ್ಥಿತರಿದ್ದರು.
ಎರಡು ದಿನಗಳೊಳಗೆ ಬೀಗ ತೆರೆಯದಿದ್ದರೆ ಬೀದರ್ ಜಿಲ್ಲೆಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಯಾವುದೇ ಅಹಿತಕರ ಘಟನೆಗೆ ಆಡಳಿತವೇ ಜವಾಬ್ದಾರ” ಎಂದು ಎಚ್ಚರಿಕೆ ನೀಡಲಾಗಿದೆ.





























