
ಬೀದರ, ಅ 28: ಎಣ್ಣೆಕಾಳು ಬೆಳೆಗಳಲ್ಲಿ ಸ್ವಾವಲಂಬನೆ ಸಾಧಿಸಲು ಒತ್ತು ಕೊಡುವಂತೆ ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ರೈತರಿಗೆ ಸಲಹೆ ನೀಡಿದರು.
ಬೀದರ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಬೀದರ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಖಾದ್ಯತೈಲ ಅಭಿಯಾನ (ಎಣ್ಣೆಕಾಳು) ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ವಸ್ತುಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಖಾದ್ಯತೈಲ ಅಭಿಯಾನ ಎಣ್ಣೆಕಾಳು ಯೋಜನೆಯಡಿ ಕೃಷಿ ಇಲಾಖೆಯಿಂದ ಕುಸುಬೆ, ಶೇಂಗಾ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಸ್ಥಳೀಯವಾಗಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲು ತಿಳಿಸಿ, ಜಿಲ್ಲೆಯಲ್ಲಿ ಎಣ್ಣೆಕಾಳುಗಳನ್ನು ಬೆಳೆಸಿ ಅನ್ಯ ಜಿಲ್ಲೆ ಹಾಗೂ ರಾಜ್ಯಗಳಿಗೂ ಪೂರೈಸುವಂತೆ ರೈತರಿಗೆ ತಿಳಿಸಿದರು.
ಔರಾದ (ಬಾ) ಸಹಾಯಕ ಕೃಷಿ ನಿರ್ದೇಶಕ ಮಾತಾರ್ಂಡ ಮಾತನಾಡಿ, “ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಳ ಮತ್ತು ರೈತರ ಆದಾಯ ಹೆಚ್ಚಿಸುವಲ್ಲಿ ತಾಂತ್ರಿಕತೆಗಳ ಪಾತ್ರ” ಕುರಿತು ವಿವರಿಸಿದರು.
ಬೀದರ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ದೇವಿಕಾ.ಆರ್. ಮಾತನಾಡಿ, ರಾಷ್ಟ್ರೀಯ ಖಾದ್ಯತೈಲ ಅಭಿಯಾನ ಎಣ್ಣೆಕಾಳು ಯೋಜನೆಯ ಮಹತ್ವದ ಕುರಿತು ತಿಳಿಸಿದರು. ರೈತರು ಎಣ್ಣೆಕಾಳು ಕೃಷಿಗೆ ಒಲವು ತೋರಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಸಿ ಉತ್ಪಾದಕತೆಯನ್ನು ಹೆಚ್ಚಿಸಬೇಕು ಹಾಗೂ ಶುದ್ಧ ಖಾದ್ಯತೈಲ ಬಳಸಬೇಕು ಎಂದರು. ಎಣ್ಣೆಕಾಳು ಬೆಳೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಎಣ್ಣೆಕಾಳು ಕೋಯ್ಲೋತರ ಘಟಕಗಳಿಗೆ ಅವಶ್ಯವಿರುವ ಯಂತ್ರೋಪಕರಣಗಳನ್ನು ಖರೀದಿಸಲು ರೈತರಿಗೆ, ಸರ್ಕಾರೇತರ ಸಂಸ್ಥೆಗಳಿಗೆ, ರೈತ ಉತ್ಪಾದಕ ಸಂಘಗಳಿಗೆ (ಈPಔ) ಹಾಗೂ ಸ್ವ-ಸಹಾಯ ಗುಂಪುಗಳಿಗೆ ಯೋಜನಾ ವೆಚ್ಚದ ಶೇ. 33 ರಷ್ಟು ಅಥವಾ ಗರಿಷ್ಠ 9.90 ಲಕ್ಷಗಳವರೆಗೆ ಸಹಾಯಧನ ಒದಗಿಸಲಾಗುವುದೆಂದು ತಿಳಿಸಿದರು.
ಬೀದರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಕೃಷಿ ಇಲಾಖೆ ಹಾಗೂ ಇತರೆ ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ತಿಳಿಸಿ, ರೈತರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಹಾಗೂ ವಿಜ್ಞಾನಿಗಳಾದ ಡಾ. ಭವಾನಿ ಮಾತನಾಡಿ, ಆರೋಗ್ಯದಲ್ಲಿ ಖಾದ್ಯತೈಲಗಳ ಪ್ರಮುಖ ಪಾತ್ರದ ಕುರಿತು ತಿಳಿಸಿದರು.
ವಿಜ್ಞಾನಿ ಡಾ. ಆರ್.ಎಲ್. ಜಾಧವ ಖಾದ್ಯತೈಲ ಬೆಳೆಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತು, ವಿಜ್ಞಾನಿ ಡಾ. ಸುನಿಲ್ ಎಂ.ಎನ್. ಎಣ್ಣೆಕಾಳು ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ಬಗ್ಗೆ ಹಾಗೂ ವಿಜ್ಞಾನಿ ಡಾ. ಜ್ಞಾನದೇವ ಬುಳ್ಳ ಎಣ್ಣೆಕಾಳು ಬೆಳೆಗಳಲ್ಲಿ ಬೀಜೋತ್ಪಾದನೆ ಕುರಿತು ಮಾಹಿತಿ ನೀಡಿದರು.
ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜಶೇಖರ ಬಸನಾಯಕ ಮಾತನಾಡಿ, ನೈಸರ್ಗಿಕ ಕೃಷಿ ಹಾಗೂ ಎಣ್ಣೆಕಾಳು ಬೆಳೆಗಳ ಕ್ಷೇತ್ರ ವಿಸ್ತರಣೆ ಬಗ್ಗೆ ವಿವರಿಸಿದರು. ಜಂಟಿ ತೋಟಗಾರಿಕೆ ನಿರ್ದೇಶಕರು ಇಲಾಖೆಯಿಂದ ತಾಳೆಎಣ್ಣೆ ಅಭಿಯಾನ ಹಾಗೂ ಜೇನುಸಾಕಾಣಿಕೆ ವಿಷಯವಾಗಿ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ರೈತ ಉತ್ಪಾದಕರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಕೃಷಿ ಸಖಿಯರು ಉಪಸ್ಥಿತರಿದ್ದರು. ಬೀದರ ಉಪ ಕೃಷಿ ನಿರ್ದೇಶಕರು-1 ಅನ್ಸಾರಿ ಎಂ.ಎ.ಕೆ. ವಂದನಾರ್ಪಣೆ ಮಾಡುವುದರೊಂದಿಗೆ ಕಾರ್ಯಾಗಾರವು ಮುಕ್ತಾಯಗೊಂಡಿತು.






















