ಮೈಸೂರು,ನ.೭: ಸರಗೂರು ತಾಲೂಕಿನ ಹಳೇ ಹೆಗ್ಗುಡಿಲು ಗ್ರಾಮದ ಒಂದು ಜಮೀನಿನಲ್ಲಿ ಬೆಳಿಗ್ಗೆ ಹುಲಿಯ ದಾಳಿಗೆ ರೈತ ಚೌಡನಾಯಕ (೪೦) ಬಲಿಯಾಗಿದ್ದಾರೆ. ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಹುಲಿ ಅವರ ಮೇಲೆ ದಾಳಿ ಮಾಡಿ ಎಳೆದುಕೊಂಡು ಹೋಗಿದೆ.
ದಾಳಿ ನಡೆದ ಸಮಯದಲ್ಲಿ ಅಲ್ಲಿದ್ದ ಎತ್ತುಗಳು ಗಾಬರಿಗೊಂಡು ರೈತನ ಮನೆಗೆ ಓಡಿಬಂದಿದ್ದವು. ಈ ಸಂಗತಿ ಕಂಡು ಕುಟುಂಬದವರು ಮತ್ತು ಗ್ರಾಮಸ್ಥರು ಆತಂಕಗೊಂಡು ಜಮೀನಿನತ್ತ ಹೋಗಿ ಹುಡುಕಿದಾಗ, ಒಂದು ಹಳ್ಳದಲ್ಲಿ ಹುಲಿ ತಿಂದು ಬಿಸಾಡಿರುವ ರೀತಿಯಲ್ಲಿ ಚೌಡನಾಯಕನ ಮೃತದೇಹ ಪತ್ತೆಯಾಗಿದೆ.
ಕುಟುಂಬದ ದುರದೃಷ್ಟಕ್ಕೆ ಇದು ಎರಡನೇ ದುರ್ಘಟನೆ. ಕಳೆದ ವರ್ಷ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಚೌಡನಾಯಕರ ಮೇಲೆ ಆನೆ ದಾಳಿ ಮಾಡಿತ್ತು. ಅದರಲ್ಲಿ ಅವರ ಸೊಂಟ ಮುರಿದು ಹೋಗಿದ್ದು, ಚಿಕಿತ್ಸೆ ಮುಗಿಸಿ ಸುಮಾರು ಮೂರು ತಿಂಗಳ ಹಿಂದೆ ಮಾತ್ರ ಕೆಲಸಕ್ಕೆ ಮರಳಿದ್ದರು.
ಈ ಘಟನೆಯಿಂದ ಚೌಡನಾಯಕರ ಪತ್ನಿ ರುಕ್ಮಿಣಿ ಮತ್ತು ಮೂವರು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಘಟನೆಯ ಸ್ಥಳಕ್ಕೆ ಹೆಡಿಯಾಲ ಎಸಿಎಫ್ ಪರಮೇಶ್, ಆರ್‌ಪಿಒ ಅಮೃತ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಸರಗೂರು ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಸರಗೂರು ಬಡಗಲಪುರ ಗ್ರಾಮದ ರೈತ ಮಹಾದೇವ (ಮಾದೇಗೌಡ) ಹುಲಿ ದಾಳಿಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ uಟಿಜeಡಿರಿದ್ದಾರೆ. ಇದರ ಜೊತೆಯೇ, ಬಣ್ಣೆಗೆರೆ ಗ್ರಾಮದ ರಾಜಶೇಖರ್ ಮತ್ತು ಕುರ್ಣೇಗಾಲ ಗ್ರಾಮದ ದೊಡ್ಡನಿಂಗಯ್ಯ (೬೫) ಹುಲಿ ದಾಳಿಗೆ ಬಲಿಯಾಗಿದ್ದರು. ಚೌಡನಾಯಕರ ಮರಣದೊಂದಿಗೆ, ಈ ಪ್ರದೇಶದಲ್ಲಿ ಹುಲಿ ದಾಳಿಯಿಂದ ಮರಣಿಸಿದವರ ಸಂಖ್ಯೆ ಮೂರಿಗೇರಿದೆ.




























