
ಯಾದಗಿರಿ:ಜ.25: ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಆದಿಶಕ್ತಿ ಶ್ರೀ ದುರ್ಗಾದೇವಿಯ ಜಾತ್ರೆ ಜ.27ರಿಂದ ಆರಂಭವಾಗಲಿದೆ. ಜಾತ್ರೆಗೆ ಇನ್ನೇನು ದಿನಗಳು ಬಾಕಿ ಇರುವುದರಿಂದಲೇ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ.
ಮಂಗಳವಾರ ಬೆಳಿಗ್ಗೆ ಕಳಸಾ ಪೂಜೆಯೊಂದಿಗೆ ಜಾತ್ರೆ ಆರಂಭವಾಗಲಿದ್ದು, ಕೃಷ್ಣಾ ನದಿಗೆ ತೆರಳಿ ಗಂಗಾ ಸ್ನಾನ, ನಂತರ ದೇವಿಗೆ ಪೂಜೆ-ಪುನಸ್ಕಾರಗಳು ನಡೆಯಲಿವೆ. ಮಧ್ಯಾಹ್ನ ಅಗ್ನಿ ಪ್ರವೇಶ, ಜ್ಯೋತಿ ಹರಕೆ, ಸಂಜೆ ಉಚ್ಚಾಯಿ ಮಹೋತ್ಸವ ಜಾತ್ರೆಯ ಪ್ರಮುಖ ಕಾರ್ಯಕ್ರಮಗಳಾಗಿವೆ. ರಾತ್ರಿ ಭಜನಾ ಕಾರ್ಯಕ್ರಮಗಳು ನಡೆಯಲಿವೆ.
ಬುಧವಾರ ಮುಂಜಾನೆ ಪಾಯಸ ತಿರುಗಿಸುವ ಪವಾಡ, ಮಕ್ಕಳ ಜವಳಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ಮಹಾ ರಥೋತ್ಸವ ನಡೆಯಲಿದ್ದು, ರಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಬಳಿಕ ಜೋಗುತಿ ಕುಣಿತ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಗ್ರಾಮಸ್ಥರು ಹಾಗೂ ಭಕ್ತರನ್ನು ರಂಜಿಸಲಿವೆ.
ಈ ಜಾತ್ರೆಗೆ ಯಾದಗಿರಿ ಜಿಲ್ಲೆಯಷ್ಟೇ ಅಲ್ಲದೆ ಪಕ್ಕದ ಜಿಲ್ಲೆಗಳು ಹಾಗೂ ಆಂಧ್ರ, ತೆಲಂಗಾಣ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೊರ ಊರುಗಳಿಂದ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಯಶಸ್ಸಿಗಾಗಿ ಗ್ರಾಮಸ್ಥರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.
























