ಕಣ್ಮನಸೆಳೆದ ಜಂಬೂಸವಾರಿ

ಬೆಂಗಳೂರು ಅ.೨- ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಶ್ವವಿಖ್ಯಾತ ಜಂಬೂ ಸವಾರಿ ಇಂದು ಅತ್ಯಂತ ವೈಭವವಾಗಿ ಭಕ್ತಿ ಸಡಗರ ಸಂಭ್ರಮದಿಂದ ನಡೆಯಿತು.


ದಸರಾ ಗಜಪಡೆಯ ನಾಯಕ ಅಭಿಮನ್ಯು ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತು ರಾಜಗಾಂಭೀರ್ಯದಿಂದ ಸಾಲಾಂಕೃತ ಆನೆಗಳ ಜೊತೆ ಹೆಜ್ಜೆ ಹಾಕಿದ ದೃಶ್ಯವನ್ನು ಲಕ್ಷಾಂತರ ಜನ ಕಣ್ತುಂಬಿಕೊಂಡು ನಾಡ ದೇವತೆ ಚಾಮುಂಡೇಶ್ವರಿಗೆ ನಮಿಸಿ ಭಕ್ತಿ ಭಾವದಲ್ಲಿ ಮಿಂದೆದ್ದರು. ಕಳೆದ ಹತ್ತು ದಿನಗಳಿಂದ ನಾಡ ಹಬ್ಬ ದಸರಾ ನಾಡಿನ ಕಲೆ ಸಂಸ್ಕೃತಿ ಪರಂಪರೆ ಯದುವಂಶದ ಭವ್ಯ ಇತಿಹಾಸ ಇವುಗಳಿಗೆ ಸಾಕ್ಷಿಯಾಗಿದ್ದು ದಸರಾದ ಕೊನೆಯ ದಿನವಾದ ಇಂದು ನಡೆದ ವಿಶ್ವವಿಖ್ಯಾತ ಜಂಬೂ ಸವಾರಿ ನಾಡಿನ ಸಾಂಸ್ಕೃತಿಕ ವೈಭವಕ್ಕೆ ಮತ್ತಷ್ಟು ಮೆರಗು ತುಂಬಿತು ಮೈಸೂರಿನ ಅರಮನೆಯಿಂದ ಆರಂಭವಾದ ಜಂಬೂಸವಾರಿಯ ಮೆರವಣಿಗೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಾಗಿ ಬನ್ನಿ ಮಂಟಪದಲ್ಲಿ ಸಂಜೆ ಕೊನೆಯಾಯಿತು ಗಜ ಪಡೆಯ ನಾಯಕ ಅಭಿಮನ್ಯು ೭೫೦ ಕೆಜಿ ತೂಕದ ಅಂಬಾರಿಯಲ್ಲಿ ವಿರಾಜಮಾನವಾದ ನಾಡ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ತನ್ನ ಸಹವರ್ತಿ ಆನೆಗಳ ಜೊತೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದ ದೃಶ್ಯ ಅತ್ಯಂತ ನಯನ ಮನೋಹರವಾಗಿದ್ದು ನೋಡುಗರ ಮನ ಸೆಳೆಯಿತು ಜಂಬು ಸವಾರಿಯಲ್ಲಿ ನಾಡಿನ ಕಲೆ ಸಂಸ್ಕೃತಿಗಳನ್ನು ಬಿಂಬಿಸುವ ವಿವಿಧ ಜಿಲ್ಲೆಗಳ ಸ್ತಬ್ಧ ಚಿತ್ರಗಳು ಸಹ ವಿಶೇಷ ಆಕರ್ಷಣೆಯಾಗಿ ಎಲ್ಲರ ಮನ ಗೆದ್ದಿತು ಜೊತೆಗೆ ವಿವಿಧ ಜಾನಪದ ಕಲಾತಂಡಗಳು ಜಂಬೂಸವಾರಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ಆಕರ್ಷಕ ಕಲಾ ಪ್ರದರ್ಶನ ನೀಡಿ ಜನರ ಮೆಚ್ಚುಗೆಗೆ ಪಾತ್ರವಾದವು.


ನಂದಿಧ್ವಜ ಪೂಜೆ


ಜಂಬೂಸವಾರಿಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ ೧ ಗಂಟೆಯಿಂದ ೧ಗಂಟೆ ೧೮ ನಿಮಿಷದ ಒಳಗಿನ ಶುಭ ಧನೂರ್ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಅಧಿಕೃತ ಚಾಲನೆ ನೀಡಿದರು ಇದಾದ ಬಳಿಕ ಗಜ ಪಡೆಗಳು ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಹೊತ್ತು ಅರಮನೆಯಿಂದ ಹೊರ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೈಸೂರು ರಾಜವಂಶಸ್ಥ ಸಂಸದ ಯದುವೀರ ಒಡೆಯರ್ ಸೇರಿದಂತೆ ಹಲವು ಗಣ್ಯರು ಅಭಿಮನ್ಯುವಿನ ಮೇಲೆ ಅಂಬಾರಿಯಲ್ಲಿ ವಿರಾಜಮಾನವಾದ ನಾಡದೇವತೆಗೆ ಪುಷ್ಪಾರ್ಚನೆ ಸಲ್ಲಿಸಿ ನಮಿಸಿದರು.


ಕಳೆದ ೧೦ ದಿನಗಳಿಂದ ಮೈಸೂರಿನಲ್ಲಿ ನಾಡಹಬ್ಬ ಅತ್ಯಂತ ಸಂಭ್ರಮ ಸಡಗರದಿಂದ ನಡೆದಿದ್ದು, ಏರ್ ಶೋ, ಫಲಪುಷ್ಪ ಪ್ರದರ್ಶನ, ಯುವ ದಸರೆ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ನಾಡ ಕುಸ್ತಿ, ಪಂಜ ಕುಸ್ತಿ, ಟಾಂಗಾ ಸವಾರಿ, ಡ್ರೋನ್ ಶೋ, ಮಹಿಳಾ ದಸರಾ, ರೈತ ದಸರಾ, ಮಕ್ಕಳ ದಸರಾ, ಕವಿಗೋಷ್ಠಿ, ದೀಪಾಲಂಕಾರ, ದಸರಾ ಕ್ರೀಡಾಕೂಟ, ಚಲನಚಿತ್ರೋತ್ಸವ… ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮಿಂದೇದ್ದಿತ್ತು.


ಈ ಬಾರಿಯ ಅದ್ಧೂರಿ ದಸರಾ ಮಹೋತ್ಸವಕ್ಕೆ ಸೆ.೨೨ರಂದು ಚಾಮುಂಡೇಶ್ವರಿಯ ಅಗ್ರಪೂಜೆಯೊಡನೆ ಚಾಲನೆ ದೊರೆತಿತ್ತು. ಕಳೆದ ೧೦ ದಿನಗಳಿಂದ ವಿವಿಧ ಕಾರ್ಯಕ್ರಮಗಳ ಮೂಲಕ ದೇಶ ವಿದೇಶದ ಲಕ್ಷಾಂತರ ಮಂದಿಯನ್ನು ಆಕರ್ಷಿಸಿದ್ದ ನಾಡಹಬ್ಬಕ್ಕೆ ಜಂಬೂಸವಾರಿ ಮತ್ತು ಪಂಜಿನ ಕವಾಯತಿನೊಂದಿಗೆ ಇಂದು ತೆರೆ ಬಿದ್ದಿದೆ.

ಪಂಜಿನ ಕವಾಯತಿನೊಂದಿಗೆ ತೆರೆ


ಚಾಮುಂಡಿಬೆಟ್ಟದಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರಿಂದ ಚಾಮುಂಡೇಶ್ವರಿಯ ಅಗ್ರ ಪೂಜೆ ಹಾಗೂ ಪುಷ್ಪಾರ್ಚನೆ ಮೂಲಕ ಆರಂಭವಾಗಿದ್ದ ನವರಾತ್ರಿ ಉತ್ಸವಕ್ಕೆ ಜಂಬೂಸವಾರಿ ಹಾಗೂ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತಿನ ಮೂಲಕ ತೆರೆ ಬೀಳಲಿದೆ.

ವಿಜಯ ದಶಮಿಯಂದು ರಾತ್ರಿ ನಡೆಯುವ ಪಂಜಿನ ಪವಾಯತಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ರಾತ್ರಿ ೭.೩೦ರಿಂದ ಪಂಜಿನಕವಾಯತು (ಟಾರ್ಚ್‌ಲೈಟ್ ಪೆರೇಡ್) ಆರಂಭವಾಗಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ನಾಡಗೀತೆ ಬಳಿಕ ಎರಡು ಗಂಟೆಗಳ ಕಾಲ ಪೊಲೀಸ್ ಸಿಬ್ಬಂದಿ ಸಾಹಸಮಯ ಪ್ರದರ್ಶನ ನೀಡಲಿದ್ದು, ಮೈನವಿರೇಳಿಸುವ ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನ ಮಾಡಲಿದ್ದಾರೆ. ಕೊನೆಗೆ ಪಂಜಿನ ಕವಾಯತಿನ ಮೂಲಕ ಹತ್ತು ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.

ಮೈಸೂರಿನಲ್ಲಿ ಖಾಕಿ ಕಣ್ಗಾವಲು


ನಾಡಿನ ವಿವಿಧೆಡೆಯಿಂದ ಲಕ್ಷಾಂತರ ಜನರು ಜಂಜೂಸವಾರಿ ವೀಕ್ಷಣೆಗೆ ಆಗಮಿಸುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡು ಹಂತದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ರಾಜ್ಯದ ವಿವಿಧೆಡೆಯಿಂದ ೬೧೮೪ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ.

೫ ಎಸ್ಪಿ, ೩೦ ಡಿವೈಎಸ್ಪಿ, ೪೦ ಇನ್ಸ್‌ಪೆಕ್ಟರ್ , ೩೫ ಕೆಎಸ್‌ಆರ್‍ಪಿ ತುಕಡಿ, ೧೫ ಸಿಆರ್ ತುಕಡಿ, ೨೯ ಎಎಸ್ಸಿ ತಂಡ, ೧ ಆರೆಎಫ್ ಹಾಗೂ ೧೭೦೦ ಹೋಮ್ ಗಾರ್ಡ್‌ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾಗವಲು, ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲಿರುವ ಅಭಿಮನ್ಯು ಆನೆ ಸುತ್ತ ಜನಸಂದಣಿ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಇನ್ನು ಜಂಬೂಸವಾರಿ ಬಳಿಕ ಪಂಜಿನ ಕವಾಯತಿನಲ್ಲಿಯೂ ಯಾವುದೇ ರೀತಿ ಗೊಂದಲ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.


ಮೆರವಣಿಗೆ ಸಾಗುವ ರಸ್ತೆ, ಪ್ರಮುಖ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದು, ಅಲ್ಲಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇದೇ ಪ್ರಥಮ ಬಾರಿಗೆ ದಸರಾ ಮಹೋತ್ಸವದಲ್ಲಿ ವಾಚ್ ಟವರ್ ವ್ಯವಸ್ಥೆ ಮಾಡಲಾಗಿದೆ.

೬ನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು


೨೦೨೦,೨೧ರಲ್ಲಿ ಕೊರೊನಾ ಕಾರಣದಿಂದಾಗಿ ಅರಮನೆಗೆ ಸೀಮಿತವಾಗಿದ್ದ ಜಂಬೂ ಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಅರಮನೆ ಆವರಣದಲ್ಲಷ್ಟೇ ಅಂಬಾರಿ ಹೊತ್ತಿದ್ದ. ೨೦೨೨, ೨೩, ೨೪ರಲ್ಲಿ ಬನ್ನಿಮಂಟಪದವರೆಗೆ ಚಿನ್ನದ ಅಂಬಾರಿ ಗೊತ್ತು ಸೈ ಎನಿಸಿಕೊಂಡಿದ್ದ ಅಭಿಮನ್ಯು ಸತತ ೬ನೇ ಬಾರಿಗೆ ೭೫೦ ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿದ್ದಾನೆ.


ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪತ್ ಆನೆಯಾಗಿ ಗೋಪಿಯನ್ನು ಆಯ್ಕೆ ಮಾಡಲಾಗಿದ್ದು, ಇಡೀ ಮೆರವಣಿಗೆಯನ್ನು ಧನಂಜಯ ಮುನ್ನಡೆಸಿದರೆ, ಹಿಂದೆ ಗೋಪಿ ಸಾಗಿದೆ. ಬಳಿಕ ಸಾಲಾನೆಯ ಮೊದಲ ತಂಡದಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ ಆನೆ, ೨ನೇ ತಂಡದಲ್ಲಿ ಕಂಜನ್, ಭೀಮ ಮತ್ತು ಏಕಲವ್ಯ ಸಾಗಿದರೆ. ೩ನೇ ತಂಡದಲ್ಲಿ ಪ್ರಶಾಂತ, ಸುಗ್ರೀವ ಹಾಗೂ ಹೇಮಾವತಿ ಆನೆಗಳು ಜಂಬೂ ಸವಾರಿಯಲ್ಲಿ ಜೊತೆಗೆ ಹೆಜ್ಜೆ ಹಾಕಿದವು.