ಜಾತಿ ಸಮೀಕ್ಷೆ ಅವಧಿ ವಿಸ್ತರಣೆ

ಬೆಂಗಳೂರು, ಅ. ೬- ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿ ಇನ್ನು ೩-೪ ದಿನ ವಿಸ್ತರಣೆಯಾಗುವುದು ಬಹುತೇಕ ನಿಶ್ಚಿತ.


ಕಳೆದ ಸೆ. ೨೨ ರಿಂದ ಈ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆಗೆ ಅ. ೭ ನಾಳೆ ಅಂತಿಮ ದಿನವಾಗಿತ್ತು. ಇನ್ನು ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಸಮೀಕ್ಷಾ ಅವಧಿಯನ್ನು ವಿಸ್ತರಿಸಲು ಹಿಂದುಳಿದ ವರ್ಗಗಳ ಆಯೋಗ ತೀರ್ಮಾನಿಸಿದೆ ಎಂದು ಹೇಳಲಾಗಿದೆ.


ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ಇನ್ನು ೩-೪ ದಿನ ವಿಸ್ತರಿಸುವ ಬಗ್ಗೆ ನಾಳೆ ಸಂಜೆಯೊಳಗೆ ಹಿಂದುಳಿದ ವರ್ಗಗಳ ಆಯೋಗ ಅಧಿಕೃತವಾಗಿ ಪ್ರಕಟಿಸಲಿದೆ ಎಂದು ಆಯೋಗದ ಮೂಲಗಳು ಹೇಳಿವೆ.


ರಾಜ್ಯದಲ್ಲಿ ಒಟ್ಟು ೧,೪೩,೭೭,೯೭೮ ಮನೆಗಳ ಸಮೀಕ್ಷೆ ಗುರಿಯನ್ನು ಹೊಂದಲಾಗಿತ್ತು. ಇದುವರೆಗೂ ೧,೦೯,೨೨,೧೦೭ ಮನೆಗಳ ಸಮೀಕ್ಷಾ ಕಾರ್ಯ ಮುಗಿದಿದ್ದು, ಇನ್ನೊಂದು ದಿನದ ಒಳಗೆ ಬಾಕಿ ಉಳಿದಿರುವ ೩೩ ಲಕ್ಷ ಮನೆಗಳ ಸಮೀಕ್ಷೆ ನಾಳೆಯೊಳಗೆ ನಡೆಸುವುದು ಸಾಧ್ಯವಾಗದ ಕಾರಣ ಈ ಸಮೀಕ್ಷಾ ಅವಧಿಯನ್ನು ಮುಂದೂಡುವ ಬಗ್ಗೆ ಆಯೋಗ ಸಂಜೆ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಲಾಗಿದೆ.


ಆರಂಭದಿಂದಲೂ ಸಮೀಕ್ಷೆ ತಾಂತ್ರಿಕ ದೋಷ, ಸರ್ವರ್ ಡೌನ್, ಆಪ್ ಸರಿಯಾಗಿ ಕೆಲಸ ಮಾಡದಿರುವುದು ಹೀಗೆ ನಾನಾ ಅಡೆತಡೆಗಳಿಂದ ಕೂಡಿತ್ತು. ಈಗ ತಾಂತ್ರಿಕ ದೋಷಗಳೆಲ್ಲಾ ಬಹುತೇಕ ಸರಿಗೊಂಡಿದ್ದು, ಗಣತಿ ಚುರುಕಿನಿಂದ ನಡೆದಿದೆ.


ರಾಜಧಾನಿ ಬೆಂಗಳೂರಿನಲ್ಲಿ ಅ. ೩ ರಿಂದ ಸಮೀಕ್ಷೆ ಆರಂಭವಾಗಿದ್ದು, ಶೇ. ೭೦ ರಷ್ಟೆ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ಇನ್ನು ರಾಜಧಾನಿಯಲ್ಲೂ ಶೇ. ೩೦ ರಷ್ಟು ಮನೆಗಳ ಸಮೀಕ್ಷೆ ಬಾಕಿ ಇದೆ. ಹಾಗಾಗಿ ಸಂಪೂರ್ಣ ಎಲ್ಲ ಮನೆಗಳ ಸಮೀಕ್ಷೆ ನಡೆಸಲು ಅನುವಾಗುವಂತೆ ಆಯೋಗ ಸಮೀಕ್ಷೆಯ ಅವಧಿಯನ್ನು ವಿಸ್ತರಿಸುವ ತೀರ್ಮಾನ ಮಾಡುತ್ತದೆ ಎಂದು ಹೇಳಲಾಗಿದೆ.


ಸಮೀಕ್ಷೆಗೆ ೧೫ ದಿನಗಳ ಅವಧಿ ಸಾಕಾಗಲ್ಲ, ಅವಧಿಯನ್ನು ವಿಸ್ತರಿಸಬೇಕು ಎಂದು ಸಮೀಕ್ಷಾ ಆರಂಭದ ದಿನದಿಂದಲೇ ಒತ್ತಾಯಗಳು ಕೇಳಿ ಬಂದಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಯೋಗದ ಅಧ್ಯಕ್ಷ ಮಧುಸೂಧನ್ ನಾಯಕ್ ಇವರುಗಳು ಅಗತ್ಯ ಬಿದ್ದರೆ ಅವಧಿ ವಿಸ್ತರಿಸುತ್ತೇವೆ ಎಂದು ಹೇಳಿದ್ದರು.


ಈಗ ಹಲವು ಲಕ್ಷ ಕುಟುಂಬಗಳ ಸಮೀಕ್ಷಾ ಕಾರ್ಯ ಬಾಕಿ ಇರುವುದರಿಂದ ಅವಧಿ ವಿಸ್ತರಿಸುವ ಬಗ್ಗೆ ಆಯೋಗ ತೀರ್ಮಾನ ಕೈಗೊಳ್ಳುವುದು ನಿಶ್ಚಿತ ಎಂದು ಹೇಳಲಾಗಿದೆ.
ಆಯೋಗ ಒಂದು ವೇಳೆ ಅವಧಿ ವಿಸ್ತರಿಸಿದರೆ ಶಿಕ್ಷಕರ ದಸರಾ ರಜೆಯೂ ಮುಗಿಯುವುದರಿಂದ ಸಂಜೆ ವೇಳೆ ಇಲ್ಲವೇ ಶಾಲೆಗಳಿಗೆ ರಜೆ ಹಾಕಿ ಶಿಕ್ಷಕರು ಸಮೀಕ್ಷೆ ನಡೆಸುವ ಅನಿವಾರ್ಯತೆ ಎದುರಾಗಲಿದೆ.


ಇದೆಲ್ಲವನ್ನು ಆಯೋಗ ಯಾವ ರೀತಿ ನಿಭಾಯಿಸುತ್ತದೆ, ಸಮೀಕ್ಷೆ ಅವಧಿಯನ್ನು ವಿಸ್ತರಿಸಿ ಯಾವ ಸಮಯದಲ್ಲಿ ಸಮೀಕ್ಷೆ ನಡೆಸಿ ಎಂದು ಶಿಕ್ಷಕರಿಗೆ ಹಾಗೂ ಸರ್ಕಾರಿ ನೌಕರರಿಗೆ ಸೂಚನೆ ನೀಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಯಾರನ್ನು ತುಳಿಯಲು ಸಮೀಕ್ಷೆ ಮಾಡುತ್ತಿಲ್ಲ: ಸಿಎಂ

ಯಾರನ್ನೂ ತುಳಿಯಲು ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ಸಮೀಕ್ಷೆ ಮಾಡುತ್ತಿಲ್ಲ, ಸಮ ಸಮಾಜ ನಿರ್ಮಾಣ ಮಾಡಬೇಕು. ಹಾಗಾಗಿ ಸಮೀಕ್ಷೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಮೇಲ್ಜಾತಿಗಳನ್ನು ತುಳಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮೀಕ್ಷೆ ಮಾಡಿಸುತ್ತಿದ್ದಾರೆ ಎಂಬ ಕೇಂದ್ರ ಸಚಿವ ಸೋಮಣ್ಣನವರ ಹೇಳಿಕೆಗೆ ಕೊಪ್ಪಳದಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರನ್ನೂ ತುಳಿಯುವ ಪ್ರಶ್ನೆ ಇಲ್ಲ. ಸಮ ಸಮಾಜ ನಿರ್ಮಾಣ ಮಾಡಬೇಕು. ಅಂಕಿ-ಅಂಶ ಬೇಕೋ, ಬೇಡವೋ ಹೇಳಿ ಎಂದರು.


ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಮೀಕ್ಷೆ ನಾಳೆ ಮುಗಿಯುವ ವಿಶ್ವಾಸವಿದೆ. ನಾಳೆ ಸಂಜೆವರೆಗೂ ನೋಡೋಣ. ನಂತರ ಸಮೀಕ್ಷಾ ಅವಧಿ ವಿಸ್ತರಿಸುವ ಬಗ್ಗೆ ಆಯೋಗ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.


ಬದಲಾವಣೆ ಬೇಡ ಎನ್ನುವವರು ಸಮೀಕ್ಷೆ ವಿರೋಧ ಮಾಡುತ್ತಾರೆ ಎಂದು ಅವರು ಬಿಜೆಪಿಯ ಕೆಲ ನಾಯಕರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದರು.


ಪ್ರತ್ಯೇಕ ಧರ್ಮದ ಕೂಗು ಮತ್ತೆ ಮುನ್ನಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುನ್ನೆಲೆಯೂ ಇಲ್ಲ, ಹಿನ್ನೆಲೆಯೂ ಇಲ್ಲ. ಕೆಲ ವಿರಕ್ತ ಸ್ವಾಮೀಜಿಗಳು ಅದರ ಬಗ್ಗೆ ಮಾತನಾಡಿದ್ದಾರೆ ಅಷ್ಟೇ ಎಂದರು.


ರಾಜ್ಯದ ಗ್ಯಾರಂಟಿ ಯೋಜನೆಗಳು ಕೆಲ ತಿಂಗಳಿನಿಂದ ಬಂದ್ ಆಗಿರುವ ಎಂಬ ಪ್ರಶ್ನೆಗೆ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿಮಗೆ ಯಾರು ಹೇಳಿದರು, ನಿಂತಿಲ್ಲ, ನಿಲ್ಲಲ್ಲ ಎಂದರು.