
ತುಮಕೂರು, ಜ. ೨೪- ಬೆಂಗಳೂರು ನಂತರ ಕಲ್ಪತರು ನಗರಿ ತುಮಕೂರು ಬೃಹತ್ ಕೈಗಾರಿಕಾ ನಗರವಾಗಿ ಹೊರಹೊಮ್ಮಿದ್ದು ಅಂತಾರಾಷ್ಟ್ರೀಯ ಬಹು ಕಂಪನಿಗಳು ಇಲ್ಲಿ ನೆಲೆಸುವಂತಹ ಅವಕಾಶಗಳು ಸೌಲಭ್ಯಗಳಿದ್ದು ಸ್ಥಳೀಯವಾಗಿ ಉದ್ಯೋಗ ನೀಡುವಂತಹ ಸಣ್ಣ ಕೈಗಾರಿಕೆಗಳು ತಮ್ಮ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಗೊಳಿಸಲು ಕೇಂದ್ರ ಸರ್ಕಾರದ ಯೋಜನೆಯಡಿ ಕೈಗಾರಿಕೆಗಳಿಗೆ ರಫ್ತು ಉತ್ತೇಜನ ಕಾರ್ಯಾಗಾರ ಬಹು ಅವಶ್ಯವಾಗಿದೆ ಎಂದು ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಸಿ.ಕೆ.ನಾಗರಾಜು ಹೇಳಿದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರ, ಕರ್ನಾಟಕ ಸ್ಟೇಟ್ಸ್ ಮಾರ್ಕೆಟಿಂಗ್ ಕಮ್ಯೂನಿಕೇಶನ್ ಅಂಡ್ ಅಡ್ವಟೈಸಿಂಗ್ ಲಿಮಿಟೆಡ್ ಮತ್ತು ಅವೇಕ್ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯ ರಪ್ತು ಉತ್ತೇಜನ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೆಗಳು ಬೆಳೆಯಲು ಉತ್ತಮವಾದ ಮಾರುಕಟ್ಟೆ ವ್ಯವಸ್ಥೆಯ ಅತಿಮುಖ್ಯವಾಗಿದ್ದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ಕಬ್ಬಿಣದ ಕಡಲೆಯಾಗಿದೆ. ಆದುದರಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯಾರ್ಂಪ್ ಮಾರುಕಟ್ಟೆಯ ವ್ಯವಸ್ಥೆ ರಪ್ತು ವ್ಯವಹಾರವನ್ನು ಸಣ್ಣ ಕೈಗಾರಿಕೆಗಳು ಬಳಸಿಕೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಡಿಸ್ಟ್ರಿಕ್ಟ್ ಎಕ್ಸ್ಪೋರ್ಟ್ ಫೋರಂ ಸಹಕಾರಿಯಾಗಿದ್ದು ಇದನ್ನು ಬಳಸಿಕೊಂಡು ಉದ್ಯಮಿಗಳು ಅಭಿವೃದ್ಧಿಗೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘಟನೆ ಅಧ್ಯಕ್ಷ ಹಾಗೂ ಎಫ್‌ಕೆಸಿಸಿಐ ಮೆಂಬರ್ ಸುಜ್ಞಾನ್ ಹಿರೇಮಠ ಮಾತನಾಡಿ, ವರ್ಲ್ಡ್ ಮ್ಯಾಪ್‌ನಲ್ಲಿ ತುಮಕೂರಿನ ಕೈಗಾರಿಕೆ ಹಬ್ ಕಾಣುತ್ತಿದೆ. ಕೈಗಾರಿಕೆಗಳ ಬೃಹತ್ ನಗರವಾಗಿ ಬೆಳೆದಿರುವ ಇಲ್ಲಿ ಎಚ್‌ಎಎಲ್, ಇಸ್ರೋ ಸೇರಿದಂತೆ ಮಲ್ಟಿ ನ್ಯಾಷನಲ್ ಕೈಗಾರಿಕೆಗಳು ತಲೆ ಎತ್ತಿರುವುದು ಶ್ಲಾಘನೀಯವಾಗಿದ್ದು ಕೈಗಾರಿಕೆಗಳು ಕೇವಲ ಸ್ಥಾಪನೆಯಾದರೆ ಸಾಲದು ಕೌಶಲ್ಯ ಭರಿತ ಉತ್ಪಾದನೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಬಳಸಿಕೊಂಡಾಗ ಮಾತ್ರ ಕೈಗಾರಿಕೆಗಳು ಉಳಿಯುತ್ತವೆ. ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರು ಕೈಗಾರಿಕೋದ್ಯಮಿಗಳಾಗಿ ಬದಲಾಗುವ ಬದಲು ಉದ್ಯೋಗಿಗಳಾಗಿ ಬದಲಾಗುತ್ತಿದ್ದಾರೆ. ಕೈಗಾರಿಕಾ ವಲಯದಲ್ಲಿ ಸಾಕಷ್ಟು ವಿಫಲವಾದ ಅವಕಾಶಗಳಿದ್ದು, ನಮ್ಮ ದೇಶದ ಯುವಕರು ವಿದೇಶಗಳಿಗೆ ತೆರಳಿ ಅಧ್ಯಯನ ಮಾಡುವ ಅವಕಾಶಗಳು ಕಡಿಮೆಯಾಗಿದೆ.
ಮುಂದುವರೆದ ತಂತ್ರಜ್ಞಾನದ ಎಲ್ಲ ಆಯಾಮಗಳನ್ನು ಬಳಸಿಕೊಂಡು ಯುವಕರು ಕೈಗಾರಿಕೆಗಳನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ನಡೆಯುವ ಕಾರ್ಯಗಾರಗಳು ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗಲಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸಲು ಉತ್ತಮವಾಗಿದೆ ಎಂದು ತಿಳಿಸಿದರು.
ವಸಂತ ನರಸಾಪುರ ಕೈಗಾರಿಕಾ ಸಂಘದ ಅಧ್ಯಕ್ಷ ಡಾ. ಹರೀಶ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಅನೇಕ ರೀತಿಯ ಸೌಕರ್ಯ ಸಹಕಾರ ಸೌಲಭ್ಯಗಳಿವೆ. ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾದ ಉತ್ಪಾದನಾ ಇಂಡಸ್ಟ್ರಿಗಳು ಬರಬೇಕಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯು ಮಾರ್ಗದರ್ಶನ ಮಾಡುತ್ತಿದೆ. ಬೆಂಗಳೂರಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲಿಯ ಭೂಮಿಯ ಬೆಲೆ ೫ ಕೋಟಿ ರೂ.ಗಳಾಗಿದ್ದು ಕೈಗಾರಿಕೆ ಸ್ಥಾಪನೆ ಮಾಡಲು ತುಮಕೂರು ಯೋಗ್ಯವಾದ ಸ್ಥಳವಾಗಿದೆ. ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ ಯುವ ಸಮೂಹ ಕೈಗಾರಿಕೆ ಸ್ಥಾಪಿಸಲು ಮುಂದಾಗಬೇಕು ಎಂದರು.
ಎಸ್ಸಿ,ಎಸ್ಟಿ ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಸೇವಂತ್ ವಾಸುದೇವ್ ಮಾತನಾಡಿ, ಕೈಗಾರಿಕಾ ನಗರ ತುಮಕೂರು ಮೊದಲು ಆಹಾರ ಸಂಸ್ಕರಣೆ ಮತ್ತು ಸಿದ್ಧ ಉಡುಪು ಕಂಪನಿಗಳನ್ನು ಒಳಗೊಂಡಿತ್ತು ಇಂದು ಅಂತಾರಾಷ್ಟ್ರೀಯ ಮಟ್ಟದ ಬಹು ಕಂಪನಿಗಳು ಸ್ಥಾಪನೆಯಾಗಿ ಸಣ್ಣಪುಟ್ಟ ಕಂಪನಿಗಳು ಮುಚ್ಚುವ ಹಂತದಲ್ಲಿವೆ ಕಾರಣ ಅವರಿಗೆ ಮಾರುಕಟ್ಟೆ ಮತ್ತು ಬಂಡವಾಳದ ಕೊರತೆ ಎದುರಾಗಿದ್ದು ಇಂತಹ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯಾರ್ಂಪ್ ಯೋಜನೆಯ ರಫ್ತು ಉತ್ತೇಜನ ಕಾರ್ಯಗಾರವು ಬಹಳ ಅನುಕೂಲವಾಗಿದ್ದು ಯುವಕರು ಇದನ್ನು ಬಳಸಿಕೊಂಡು ನೂತನ ಇಂಡಸ್ಟ್ರಿಗಳಾಗಿ ಹೊರಹೊಮ್ಮಬೇಕು ಎಂದು ಕಿವಿ ಮಾತು ಹೇಳಿದರು.
ಅವೈಕ್ ಸಂಸ್ಥೆಯ ಅಧ್ಯಕ್ಷೆ ಭುವನೇಶ್ವರಿ ಮಾತನಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ಮಹಿಳೆಯನ್ನು ತೊಡಗಿಸುವ ಸಲುವಾಗಿ ಮಹಿಳಾ ಇಂಡಸ್ಟ್ರಿಗಳನ್ನು ಹುಟ್ಟಿ ಹಾಕಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ವರದಾನವಾಗಿವೆ. ಇಂದಿನ ಯುವ ಮಹಿಳೆಯರು ಸಬಲೀಕರಣದ ಜತೆಗೆ ಉದ್ಯೋಗ ನೀಡುವ ದಾತರಾಗಬೇಕು ಎಂದು ತಿಳಿಸಿದರು.
ರಪ್ತು ಉತ್ತೇಜನ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಾದ ಕೋದಂಡರಾಮ ಅವರು ಸಣ್ಣ ಕೈಗಾರಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮಾರುಕಟ್ಟೆಯನ್ನು ಗುರುತಿಸಿಕೊಳ್ಳುವ ವಿವಿಧ ವಿಧಾನಗಳನ್ನು ಕಾರ್ಯಗಾರದಲ್ಲಿ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ವಿವಿಧ ಕೈಗಾರಿಕೋದ್ಯಮಿಗಳು, ಹೊಸ ಎಂಟರ್ ಪ್ರೈಸಸ್‌ಗಳು ಸದಾಶಿವ, ಮನು, ರಘು, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.




























