ಮಾವಿನ ಹೂ-ಕಾಯಿ ಉದುರುವಿಕೆ ತಡೆಗೆ ತಜ್ಞರ ಸಲಹೆ

ಆಳಂದ:ಜ.9: ಹಣ್ಣುಗಳ ರಾಜನೆಂದು ಕರೆಯಲ್ಪಡುವ ಮಾವು ರೈತರಿಗೆ ಮುಖ್ಯ ಆದಾಯ ಮೂಲವಾಗಿದೆ. ಆದರೆ ಪ್ರಸ್ತುತ ದಿನವಿಡೀ ಒಣ ಹವೆ ಮತ್ತು ರಾತ್ರಿ ಏರುಪೇರಾಗುತ್ತಿರುವ ಚಳಿಯಿಂದ ಮಾವಿನ ಹೂ ಮತ್ತು ಕಾಯಿ ರಚನೆಗೆ ಬೂದಿ ರೋಗ ಹಾಗೂ ಜಿಗಿ ಹುಳ ತೊಂದರೆಯಾಗುತ್ತಿದೆ.
ಈ ವರ್ಷ ಕಲಬುರಗಿ ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯಾದ ಹಿನ್ನೆಲೆಯಲ್ಲಿ ಮಾವಿನ ಗಿಡಗಳು ಡಿಸೆಂಬರ್ ಅಂತ್ಯಕ್ಕೆ ಹೂವಿನ ಹಂತ ತಲುಪಿವೆ. ಸಂಕ್ರಾಂತಿ ವೇಳೆಗೆ ಬಹುತೇಕ ತೋಟಗಳಲ್ಲಿ ಶೇ.90ರಷ್ಟು ಗಿಡಗಳು ಮಿನಿ ಕಾಯಿ ಹಂತಕ್ಕೆ ಬರುವ ನಿರೀಕ್ಷೆಯಿದೆ. ಹವಾಮಾನ ಬದಲಾವಣೆಯಿಂದ ಮಾವಿನ ಬೆಳೆ ಉಳಿಸಿಕೊಳ್ಳಲು ರೈತರು ಸಸ್ಯ ಸಂರಕ್ಷಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಬೂದಿ ರೋಗ ಮತ್ತು ಜಿಗಿ ಹುಳದಿಂದ ಎಲೆ, ಹೂ ಮತ್ತು ದೇಟುಗಳು ಬಿಳಿ ಬೂದಿ ಕಣಗಳಿಂದ ಆವೃತವಾಗುತ್ತವೆ. ಜಿಗಿ ಹುಳ ಅಂಟು ದ್ರವ ಬಿಟ್ಟು ಶಿಲೀಂಧ್ರ ರೋಗಕ್ಕೆ ಕಾರಣವಾಗುತ್ತದೆ.

ಈ ತೊಂದರೆ ನಿರ್ವಹಣೆಗೆ ಸಸ್ಯ ರೋಗ ವಿಜ್ಞಾನಿ ಡಾ. ಜಹೀರ್ ಅಹಮದ್ ಅವರು ಈ ಕೆಳಗಿನ ಸಿಂಪಡಣೆ ಸಲಹೆ ನೀಡಿದ್ದಾರೆ:
ಪ್ರತಿ ಲೀಟರ್ ನೀರಿಗೆ ನೀರಿನಲ್ಲಿ ಕರಗುವ ಗಂಧಕ 3 ಗ್ರಾಂ ಅಥವಾ ಕಾಬೆರ್ಂಡಜಿಮ್ 1 ಗ್ರಾಂ ಜೊತೆಗೆ ಥಯೋಮೆಥಾಕ್ಸಾಮ್ 0.3 ಗ್ರಾಂ ಬೆರೆಸಿ ಸಿಂಪಡಿಸಬೇಕು. ಉತ್ತಮ ಕಾಯಿ ರಚನೆ ಮತ್ತು ಬೆಳವಣಿಗೆಗಾಗಿ ತೋಟಗಾರಿಕೆ ವಿಜ್ಞಾನಿ ಡಾ. ಸನ್ಮತಿ ನಾಯಕ್ (ಎಟಿಎಸ್) ಅವರು ಸಲಹೆ ನೀಡಿರುವುದು:
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಬೆಂಗಳೂರು) ಅಭಿವೃದ್ಧಿಪಡಿಸಿದ ಮಾವು ಸ್ಪೆಷಲ್ 5 ಗ್ರಾಂ ಅಥವಾ ಸಮಗ್ರ ಪೆÇೀಷಕಾಂಶ ಟಾನಿಕ್ 5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. ಚಳಿಗಾಲದಲ್ಲಿ ಗಿಡಗಳಿಗೆ ನೀರು ಏರುಪೇರಾಗದಂತೆ ಎಚ್ಚರ ವಹಿಸಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ, ಸೂಕ್ತ ಪೆÇೀಷಣೆ ಮತ್ತು ಬೇಸಾಯ ಕ್ರಮ ಅನುಸರಿಸಿ, ಕಡಿಮೆ ಪ್ರಮಾಣದ ಕಳೆನಾಶಕ ಬಳಸಬೇಕು ಎಂದು ಬೇಸಾಯ ವಿಜ್ಞಾನಿ ಡಾ. ಯೂಸುಫ್ ಅಲಿ ನಿಂಬರಗಿ ಹಾಗೂ ಮಣ್ಣು ವಿಜ್ಞಾನಿ ಡಾ. ಶ್ರೀನಿವಾಸ ಬಿ.ವಿ. ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ರೈತರು ಸಮೀಪದ ತೋಟಗಾರಿಕೆ ಇಲಾಖೆ ಅಥವಾ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜು ತೆಗ್ಗಳ್ಳಿ ತಿಳಿಸಿದ್ದಾರೆ.