
ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨೦: ನಗರದ ವಿವಿಧೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನು ತಕ್ಷಣ ದುರಸ್ತಿ ಮಾಡಬೇಕು ಹಾಗೂ ಗಣೇಶೋತ್ಸವ ಮೆರವಣಿಗೆ ಮಾರ್ಗದಲ್ಲಿ ಯಾವುದೇ ಅವಘಡ ಸಂಭವಿಸದAತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಗರ ಘಟಕ ಹಾಗೂ ಗಜಾನನ ಉತ್ಸವ ಮಹಾಮಂಡಳಿ (ಶಿವಾಜಿ ಸರ್ಕಲ್) ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ನಗರದ ವಿವಿಧೆಡೆ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ, ಜೋಡಣೆಗೊಂಡು ಹಾಗೂ ಅಪಾಯಕಾರಿ ರೀತಿಯಲ್ಲಿ ಇರುವುದರಿಂದ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕಳೆದ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ವಿದ್ಯುತ್ ತಂತಿಯಿAದಾಗಿ ಗಾಂಧಿ ವೃತ್ತದಲ್ಲಿ ಅಹಿತಕರ ಘಟನೆ ಸಂಭವಿಸಿತ್ತು. ಈ ಕುರಿತು ಹಲವು ಬಾರಿ ಜಿಲ್ಲಾಡಳಿತ ಮತ್ತು ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಣೇಶ ಚತುರ್ಥಿಗೆ ಇನ್ನೂ ೨೭ ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ, ಗಣೇಶ ಮೆರವಣಿಗೆ ಸಾಗುವ ಗಾಂಧಿ ವೃತ್ತದಿಂದ ಸರಾಫ್ ಬಜಾರ್‌ವರೆಗೆ ರಸ್ತೆಯಲ್ಲಿರುವ ವಿದ್ಯುತ್ ತಂತಿಗಳನ್ನು ಪರಿಶೀಲಿಸಿ, ಅಗತ್ಯವಿರುವ ಕಡೆ ತಂತಿಗಳ ಎತ್ತರ ಹೆಚ್ಚಿಸಬೇಕು. ತುಂಡಾಗಿ ಜೋಡಣೆ ಮಾಡಿರುವ ತಂತಿಗಳಿದ್ದರೆ ಅವುಗಳನ್ನು ತೆರವುಗೊಳಿಸಿ ಹೊಸ ತಂತಿಗಳನ್ನು ಅಳವಡಿಸಬೇಕು. ಗಣೇಶ ಮಂಡಳಿಗಳು ಮೆರವಣಿಗೆ ನಡೆಸುವ ವೇಳೆ ಯಾವುದೇ ತೊಂದರೆ ಅಥವಾ ಅಪಾಯ ಉಂಟಾಗದAತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ, ರಾಜೇಶ ತಾವಸೆ, ಶ್ರೀಕಾಂತ ಸಿಂಧೆ, ವಿಜಯ ಜೋಶಿ, ಭರತ ಕೋಳಿ, ಭೀಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ಸಿದ್ದು ಮಲ್ಲಿಕಾರ್ಜುನಮಠ, ಚಿದಾನಂದ ಚಲವಾದಿ, ಭರತ ಕುಲಕರ್ಣಿ, ಪರಶುರಾಮ ರಜಪೂತ ಸೇರಿದಂತೆ ಬಿಜೆಪಿ ಮುಖಂಡರು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.































