
ಬೀದರ್: ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ ವಸೂಲಿ ಮಾಡುತ್ತಿರುವ ಖಾಸಗಿ ಬಸ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕ ಆಗ್ರಹಿಸಿದೆ.
ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ನಿಯೋಗದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಬೀದರ್-ಬೆಂಗಳೂರು ಪ್ರಯಾಣ ದರ ಸಾಮಾನ್ಯ ದಿನಗಳಲ್ಲಿ ರೂ. 800 ರಿಂದ ರೂ. 1,200 ಇದೆ. ಆದರೆ, ಇದೀಗ ದಸರಾ ಹಾಗೂ ದೀಪಾವಳಿ ಹಬ್ಬ ಮುಂದಿಟ್ಟುಕೊಂಡು ದರವನ್ನು ರೂ. 4,000 ರಿಂದ ರೂ. 5,000 ವರೆಗೂ ಹೆಚ್ಚಳ ಮಾಡಲಾಗಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಗಮನ ಸೆಳೆದರು.
ರಾಜ್ಯದಲ್ಲಿ ಬರ ಇರುವುದರಿಂದ ಜನ ಕಷ್ಟದಲ್ಲಿದ್ದಾರೆ. ಶಿಕ್ಷಣ, ನೌಕರಿ ಹಾಗೂ ಇತರ ಕೆಲಸಕ್ಕಾಗಿ ಬೆಂಗಳೂರು ಹಾಗೂ ಇತರ ನಗರಗಳಿಗೆ ಹೋಗಿರುವ ಜಿಲ್ಲೆಯ ಜನರು ಹಬ್ಬ, ಹರಿ ದಿನಗಳಲ್ಲಿ ತವರಿಗೆ ಮರಳುವುದು ಸಾಮಾನ್ಯ. ಈ ಅನಿವಾರ್ಯತೆಯನ್ನು ಬಳಸಿಕೊಂಡು ಬಸ್ ಟಿಕೆಟ್ ದರ ಏರಿಕೆ ಮಾಡಿರುವುದು ತೀವ್ರ ಖಂಡನೀಯ. ಇದರಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಬಡವರಿಗೆ ಬಹಳ ತೊಂದರೆಯಾಗಿದೆ ಎಂದು ಹೇಳಿದರು.
ರಾಜ್ಯದಾದ್ಯಂತ ಸಂಚರಿಸುವ ಖಾಸಗಿ ಬಸ್ಗಳ ಟಿಕೆಟ್ ದರಗಳನ್ನು ಪರಿಶೀಲಿಸಬೇಕು. ನಿಗದಿತ ದರದ ಟಿಕೆಟ್ ಕೊಡಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರಯಾಣಿಕರಿಗೆ ದೂರು ಸಲ್ಲಿಸಲು ಸಹಾಯವಾಣಿ ಆರಂಭಿಸಬೇಕು. ನಿಯಮ ಉಲ್ಲಂಘಿಸಿ ಹೆಚ್ಚಿನ ದರ ವಸೂಲಿ ಮಾಡುವ ಖಾಸಗಿ ಬಸ್ಗಳ ಮಾಲೀಕರು ಹಾಗೂ ನಿರ್ವಾಹಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಖಾಸಗಿ ಬಸ್ಗಳ ಟಿಕೆಟ್ ದರ ಹೆಚ್ಚಳದ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರವಸೆ ನೀಡಿದರು.
ಸೇನೆಯ ತಾಲ್ಲೂಕು ಅಧ್ಯಕ್ಷ ಅನಿಲ್ ರಾಜಗೀರಾ, ಸಂತೋಷ್ ಪಾಟೀಲ, ರವಿ ಪಾಟೀಲ, ಸಂತೋಷ್ ಮಡಿವಾಳ, ಅನಿಲ್ ರೆಡ್ಡಿ, ರಾಜು ಕುಂಬಾರ, ಗೌರೀಶ್, ಸಂಜುಕುಮಾರ ಗಾಯಕವಾಡ್ ಮತ್ತಿತರರು ಇದ್ದರು.




















