ಅತಿಯಾದ ಮಳೆಗೆ ಕಳೆ ವ್ಯಾಪಕ!ಹಿಂಗಾರು ಬಿತ್ತನೆಗೆ ಅಡ್ಡಿಯಾದ ಅಳಲು: ರೈತರಿಗೆ ದ್ವಿಗುಣ ಆರ್ಥಿಕ ಹೊರೆ

ಆಳಂದ:ಅ.18: ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆ, ಮುಂಗಾರು ಬೆಳೆಗಳ ನಾಶದ ನೋವು ತಣಿಯುವ ಮುನ್ನವೇ ಹಿಂಗಾರು ಹಂಗಾಮಿಗೂ ಭೂಮಿ ಆರದೆ, ಬಿತ್ತನೆಗೆ ಅಡ್ಡಿಯಾಗಿದೆ.
ತಾಲ್ಲೂಕಿನ ವಿವಿಧ ಹೋಬಳಿಗಳ ರೈತರು ಈಗ ಕಳೆ ವ್ಯಾಪಕವಾಗಿ ಬೆಳೆದ ಹೊಲಗಳಲ್ಲಿ ದುಬಾರಿ ಬೆಲೆಯ ಔಷಧಿ ಸಿಂಪರಣೆಗೆ ಹರಸಾಹಸ ಪಡುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಉದ್ದು, ಹೆಸರು, ಸೋಯಾಬೀನ್ ಬೆಳೆಗಳು ಅತಿಯಾದ ಮಳೆಯಿಂದ ನಾಶವಾದ ಪರಿಣಾಮ ರೈತರು ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ, ಸೂರ್ಯಕಾಂತಿ, ಕುಸಬೆ ಹಾಗೂ ನೀರಾವರಿ ಬೆಳೆ ಬಿತ್ತನೆಗೆ ಮುಂದಾದರೂ ಭೂಮಿಯಲ್ಲಿ ಮಳೆ ನೀರು ಇನ್ನೂ ಆರದಿರುವುದರಿಂದ ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗಿದೆ.
ಇದರ ಮಧ್ಯೆ, ಹೊಲಗಳಲ್ಲಿ ಆಳೆತ್ತರದ ಕಳೆ ವ್ಯಾಪಕವಾಗಿ ಬೆಳೆಯುತ್ತಿರುವುದರಿಂದ ರೈತರು ಔಷಧಿ ಸಿಂಪರಣೆ ಮಾಡಲು ಮುಂದಾಗಿದ್ದಾರೆ. ಆದರೆ ಔಷಧಿಗಳ ಬೆಲೆ ಏರಿಕೆ, ಕೂಲಿ ಕಾರ್ಮಿಕರ ಕೊರತೆ, ಸಿಂಪರಣೆ ಯಂತ್ರ ಖರೀದಿ ಸೇರಿದಂತೆ ಎಲ್ಲವೂ ರೈತರ ಜೇಬಿಗೆ ಕತ್ತರಿ ಬಿದ್ದುಕೊಂಡು ಹೊರೆಯಾಗಿ ಪರಿಣಮಿಸಿದೆ.
“ಕಳೆ ನಿವಾರಣೆಗೆ ಬೇಕಾದ ಒಂದು ಲೀಟರ್ ಔಷಧಿಗೆ 700 ರಿಂದ 1,000 ರೂ. ಖರ್ಚಾಗುತ್ತದೆ. ಜೊತೆಗೆ ಸಿಂಪರಣೆಗೆ ಕೂಲಿ ಕೊಡಬೇಕಾಗುತ್ತದೆ. ಈ ಎಲ್ಲಾ ವೆಚ್ಚ ಸೇರಿ ಪ್ರತಿ ಏಕರೆಗೂ 2500ಡಿiಒಜ 3 ಸಾವಿಡಿ ರೂಪಾಯಿಗಳ ಖರ್ಚಾಗುತ್ತಿದೆ,” ಎಂದು ಹಲವಾರು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಮಳೆ ನಷ್ಟದಿಂದಲೇ ಕಂಗಾಲಾದ ರೈತರು ಈಗ ಹಿಂಗಾರು ಬಿತ್ತನೆಗೂ ವಿಪರೀತ ಖರ್ಚಿನ ಹೊರೆ ಎದುರಿಸುತ್ತಿದ್ದಾರೆ. ಕೃಷಿ ಇಲಾಖೆಯು ತಕ್ಷಣ ಪ್ರಭಾವಿತ ಪ್ರದೇಶಗಳ ಸರ್ವೇ ನಡೆಸಿ, ಕಳೆ ನಿವಾರಣೆ ಹಾಗೂ ಬಿತ್ತನೆ ಪುನರಾರಂಭಕ್ಕೆ ಸಬ್ಸಿಡಿ ಸಹಾಯ ನೀಡಬೇಕೆಂದು ರೈತ ಸಮುದಾಯ ಒತ್ತಾಯ ವ್ಯಕ್ತಪಡಿಸಿದೆ.
ತಾಲೂಕಿನ ಕೃಷಿ ಪರಿಸ್ಥಿತಿ ಗಂಭೀರವಾಗಿದ್ದು, ನಿರಂತರ ಮಳೆಯೊಂದಿಗೆ ಕಳೆ ವ್ಯಾಪಕವಾಗಿ ಬೆಳೆಯುತ್ತಿರುವುದು ರೈತರ ಶ್ರಮಕ್ಕೆ ಅಡ್ಡಿಯಾಗುತ್ತಿದೆ. ಸರ್ಕಾರ ತುರ್ತು ನೆರವು ಘೋಷಿಸಬೇಕೆಂಬುದು ಕೃಷಿಕರ ಒತ್ತಾಯಿಸಿದ್ದಾರೆ.