
ಬೀದರ್: ಫೆ.13:ಕಲ್ಯಾಣ ಚಾಲುಕ್ಯರ ಕಾಲದ ಪ್ರಾಚೀನ ಶಿಲ್ಪಕಲೆ ಹಾಗೂ ಶಾಸನ ಪತ್ತೆಯಾದ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಉತ್ಖನನ ನಡೆಸಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಒತ್ತಾಯಿಸಿದ್ದಾರೆ.
ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕರಿಗೆ ಈ ಕುರಿತು ಪತ್ರ ಬರೆದಿದ್ದಾರೆ.
ಚಾಲುಕ್ಯರು 11ನೇ ಶತಮಾನದಲ್ಲಿ ಕಲ್ಯಾಣವನ್ನು ರಾಜಧಾನಿಯಾಗಿಸಿಕೊಂಡು ಆಳ್ವಿಕೆ ನಡೆಸಿದ್ದರು. ಆ ವೇಳೆ ಅನೇಕ ದೇಗುಲಗಳನ್ನು ನಿರ್ಮಿಸಲಾಗಿತ್ತು. ನಾರಾಯಣಪುರ ಗ್ರಾಮವು ಭವ್ಯ ಶಿವ ದೇವಾಲಯದಿಂದ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದ್ದಾರೆ.
ನಾರಾಯಣಪುರದಲ್ಲಿ ಉತ್ಖನನದ ವೇಳೆ ಹಳೆಯ ಶಿಲ್ಪಕಲೆ ಹಾಗೂ ಶಾಸನಗಳು ಪತ್ತೆಯಾಗುತ್ತಿವೆ. ಹತ್ತು ವರ್ಷಗಳಲ್ಲಿ ಬಹಳಷ್ಟು ಶಿಲ್ಪಗಳು ಪತ್ತೆಯಾಗುತ್ತಿರುವ ಕಾರಣ ಉತ್ಖನನದ ಹೆಚ್ಚಿನ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಗ್ರಾಮದ ಸರೋವರದ ದಡದಲ್ಲಿ ಇರುವ ಭವಾನಿ ದೇವಾಲಯದ ಪಕ್ಕದಲ್ಲಿ ಕಲ್ಲಿನ ಪ್ರಾಚೀನ ಶಿಲ್ಪಕಲೆ ಪತ್ತೆಯಾಗಿದೆ. ಶಿಲ್ಪದ ಮೇಲಿನ ಸಾಲಿನಲ್ಲಿ ಕೈಯಲ್ಲಿ ಆಯುಧ ಹಿಡಿದ ದೇವತೆ ಚಿತ್ರ ಇದೆ. ಸೂರ್ಯ, ಚಂದ್ರ, ಹಸು, ನಾಗ ದೇವತೆ ಕೆತ್ತನೆ ಹೊಂದಿದ ಶಿಲ್ಪಗಳು, ಶಿವ ದೇವಾಲಯ ಸೇರಿ ವಿವಿಧೆಡೆ ಶೈವ ಪರಂಪರೆಯ ಗುರುತಾದ ಲಿಂಗಗಳೂ ಕಂಡು ಬಂದಿವೆ ಎಂದು ಹೇಳಿದ್ದಾರೆ.
ಗ್ರಾಮದಾದ್ಯಂತ ಅನೇಕ ಮಂದಿರಗಳಿವೆ. ಅಲ್ಲಲ್ಲಿ ಶಿಲ್ಪಕಲೆಗಳು ಇವೆ. ಮುಂದಿನ ಪೀಳಿಗೆಗೆ ಗತ ವೈಭವ ಪರಿಚಯಿಸಲು ಗ್ರಾಮದಲ್ಲಿ ಉತ್ಖನನ ನಡೆಸಿ, ಪ್ರಾಚೀನ ಶಿಲ್ಪಕಲೆ ಹಾಗೂ ಶಾಸನಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
























