ಪ್ರತಿಯೊಬ್ಬರು ದೇಶದ ಅಭಿಮಾನ ಬೆಳಸಿಕೊಳ್ಳಬೇಕು: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ, ಅ 18: ಪ್ರತಿ ವರ್ಷ ಸ್ವಾತಂತ್ರೋತ್ಸವ ಆಚರಿಸುತ್ತ ಬರುತ್ತಿದ್ದೇವೆ. ರಾಷ್ಟ್ರಕ್ಕೆ ತಾನು ಆತ್ಮಸಾಕ್ಷಿಯಾಗಿ ಸಲ್ಲಿಸಬೇಕಾದ ಕಾಣಿಕೆಗಳೇನು ಎಂಬುದು ಪ್ರತಿಯೊಬ್ಬ ಪ್ರಜೆ ಯೋಚಿಸಿ ದೇಶಾಭಿಮಾನ ಬೆಳಸಿಕೊಳ್ಳಬೇಕೆಂದು ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಅವರಿಂದು ಕರ್ನಾಟಕ ಸಾಹಿತ್ಯ ಸಂಘ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆಯೋಜಿಸಿದ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ ಸೇವೆಗಾಗಿ ತನ್ನ ಬಾಳನ್ನು ಮುಡುಪಾಗಿಡಬೇಕು. ಭಾವೈಕ್ಯತೆಗಾಗಿ ಶ್ರಮಿಸಬೇಕು, ದೇಶಭಕ್ತರು ಹಾಕಿಕೊಟ್ಟ ಪಥದಲ್ಲಿ ನಡೆಯಬೇಕು. ಆ ಕಾರ್ಯ ಕರ್ನಾಟಕ ಸಾಹಿತ್ಯ ಸಂಘದವರು ಸಾಹಿತ್ಯ ಚಟುವಟಿಕೆಗಳು ಆಯೋಜನೆ ಮೂಲಕ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು, ಕವಿಗಳು ಕೌಶಲ್ಯಗಳನ್ನು ಬೆಳಸಿಕೊಂಡು ಉತ್ತಮ ಸಾಹಿತ್ಯ ರಚಿಸುವ, ವಾಚಿಸುವ, ದೇಶಾಭಿಮಾನ ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತಿಳಿಸಿದರು.
ಸರಸ್ವತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಾಗೇಶ ರೆಡ್ಡಿ ಮಾತನಾಡಿ, ಸ್ವಾತಂತ್ರ್ಯೋತ್ಸವ ಆಚರಿಸುವ ದಿಶೆಯಲ್ಲಿ ಶೃದ್ಧಾ, ಭಕ್ತಿ, ಸ್ಮರಿಸುವ ಗುಣ ಬೆಳಸಿಕೊಳ್ಳಬೇಕು. ಎಲ್ಲರೂ ಸುಖವಾಗಿ ಬಾಳುವಂತೆ ಭಾವೈಕ್ಯತೆಯಿಂದ ಬದುಕಬೇಕೆಂದರು.
ಕಾರ್ಯಕ್ರಮದಲ್ಲಿ ಶಿವರಾಜ ಮಿತ್ರಾ, ಡಾ. ಸುನಿತಾ ಕೂಡ್ಲಿಕರ್, ಡಾ. ಕಿರಣ ವಲ್ಲೇಪೂರ, ಓಂಕಾರ ಉಪ್ಪೆ ಪಾಟೀಲ, ಹಮೀದ ಸಲೀಮ, ಮನ್ವರ ಅಲಿ, ಡಾ. ಸಾವಿತ್ರಿ ಹೆಬ್ಬಾಳೆ, ಅಮೀರೋದ್ದೀನ್ ಅಮಿರ, ಸಯಿದಾ ಅಸ್ರಾ ಎ. ಖಾದ್ರಿ, ಸಯಿದಾ ಕರಿಮ ಉನಿಸಾ ಖಾದ್ರಿ, ಮಸ್ತಾಫೀಮಾ ಬೇಗಂ, ಪವನ ಶಿವರಾಜ, ತನುಜಾ ಗೌತಮ್, ಭುಮವೇಶ್ವರಿ ಬಸವರಾಜ, ಸುಜಾತಾ ಡೊಂಬಾಳೆ, ಆಶಾಬಾಯಿ ರಾಠೋಡ, ರಾಜೇಶ್ವರಿ ಕರುಣಾಕರ್, ಪಿ. ಗುರುಮೂರ್ತಿ, ಕೃಷ್ಣಾವೇಣಿ ಬಿ., ಶ್ರೀಮತಿ ಇಂದಿರಾ ಮಜಗೆ ಮುಂತಾದ ಕವಿಗಳು ಕನ್ನಡ, ಹಿಂದಿ, ಉರ್ದು, ಆಂಗ್ಲ, ಮರಾಠಿ ಹಾಗೂ ಲಂಬಾಣಿ ಭಾಷೆಯಲ್ಲಿ ರಾಷ್ಟ್ರೀಯ ಭಾವೈಕ್ಯತೆ ವಿಷಯದ ಕುರಿತಾಗಿ ಕವನ ವಾಚನ ಮಾಡಿದರು.
ಕರ್ನಾಟಕ ಸಾಹಿತ್ಯ ಸಂಘ ಟ್ರಸ್ಟಿನ ಅಧ್ಯಕ್ಷ ಶಂಕರರಾವ ಹೊನ್ನಾ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷÀ ಪೆÇ್ರ. ಜಗನ್ನಾಥ ಹೆಬ್ಬಾಳೆ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ರೇಖಾಶಂಕರ ನೃತ್ಯರೂಪಕ ನಡೆಸಿಕೊಟ್ಟರು. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಜಂಟಿ ಕಾರ್ಯದರ್ಶಿಗಳಾದ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎಸ್.ಬಿ. ಕುಚಬಾಳ ಕಾರ್ಯಕ್ರಮ ನಿರೂಪಿಸಿದರು. ಕಜಾಪ ಜಿಲ್ಲಾ ಕಾರ್ಯದರ್ಶಿ ಡಾ. ಸುನಿತಾ ಕೂಡ್ಲಿಕರ್ ವಂದಿಸಿದರು.