
ಭಾಗ್ಯನಗರ, ಮಾ. ೧೮ : ಪತ್ರಕರ್ತರ ಸಂಘದ ಸಂಸ್ಥಾಪಕರಾದ ದಿ. ಡಾ. ಡಿ.ವಿ.ಗುಂಡಪ್ಪ ಅವರು ಕೇವಲ ಕವಿ ಮಾತ್ರವಲ್ಲದೆ ಸಮಾಜದ ನೈತಿಕ ಮೌಲ್ಯಗಳನ್ನು ಎತ್ತಿಹಿಡಿದ ಮಹಾನ್ ಚಿಂತಕರಾಗಿದ್ದರು ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಕರ್ತರ ಸಂಘದ ಸಂಸ್ಥಾಪಕರು ಹಾಗೂ ಕನ್ನಡ ಸಾಹಿತ್ಯದ ಮಹಾನ್ ಚಿಂತಕ ಡಾ. ಡಿ.ವಿ. ಗುಂಡಪ್ಪ ಅವರ ಜನ್ಮದಿನವನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ದಿ. ಡಾ. ಡಿ.ವಿ.ಗುಂಡಪ್ಪ ಅವರು ಕೇವಲ ಪತ್ರಕರ್ತರಾಗಿ, ಕವಿಯಾಗಿ ಮಾತ್ರವಲ್ಲದೆ ಸಮಾಜದ ನೈತಿಕ ಮೌಲ್ಯಗಳನ್ನು ಎತ್ತಿಹಿಡಿದ ಮಹಾನ್ ಚಿಂತಕರಾಗಿದ್ದರು. ಅವರ ಸಾಹಿತ್ಯದಲ್ಲಿ ಮಾನವೀಯತೆ, ನಿಷ್ಠೆ, ಶಿಸ್ತು ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶ ಅಡಕವಾಗಿದ್ದು, ಇಂದಿನ ಪತ್ರಕರ್ತರು ಅವರ ಆದರ್ಶಗಳನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಯಾಗಿರುವುದರಿಂದ ಸತ್ಯನಿಷ್ಠೆಯಿಂದ ವರದಿ ಮಾಡಬೇಕು.
ಜೊತೆಗೆ ಸಂಘಟಿತವಾಗಿರುವುದು ಅತ್ಯಂತ ಮುಖ್ಯವಾಗಿದ್ದು, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು ಮತ್ತಷ್ಟು ಬಲಪಡಿಸಲು ಕಾರ್ಯನಿರತರು ಮಾತ್ರ ಸಂಘದಲ್ಲಿ ಸದಸ್ಯತ್ವ ಪಡೆಯಬೇಕು. ಪತ್ರಿಕೆಯ ಬಗ್ಗೆ, ಸುದ್ದಿಗಳನ್ನು ಮಾಡಲೂ ಸಹ ಬಾರದವರು ಪತ್ರಕರ್ತರೆಂದು ಹೇಳಿಕೊಂಡು ತಿರುಗಾಡುತ್ತಿರುವುದು, ನಿಜವಾದ ಪತ್ರಕರ್ತರಿಗೂ ಸಹ ಕೆಟ್ಟ ಹೆಸರು ತರುತ್ತಿದ್ದಾರೆ. ಮೊದಲು ಸುದ್ದಿ ಬರೆಯಲು ಕಲಿಯಲಿ ನಂತರ ಪತ್ರಕರ್ತರಾಗಿ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ಸಾಹಿತಿ ಬಿ.ಆರ್. ಕೃಷ್ಣಾ ಮಾತನಾಡಿ, ಡಿ.ವಿ.ಗುಂಡಪ್ಪ ಅವರ ಬರಹಗಳು ಕಾಲಾತೀತವಾಗಿದ್ದು, ಯುವ ಪೀಳಿಗೆಗೆ ದಾರಿದೀಪವಾಗಿವೆ. ಪತ್ರಕರ್ತರು ಯಾವುದೇ ಒತ್ತಡಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ನ್ಯಾಯವನ್ನು ಉಳಿಸಬೇಕು ಎಂದು. ಸಂಘದ ಸದಸ್ಯತ್ವವು ಪತ್ರಕರ್ತರ ಏಕತೆ ಮತ್ತು ಹಕ್ಕುಗಳ ರಕ್ಷಣೆಗೆ ಬಲ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ಹಲವರು ಅವರ ಜೀವನ ಸಾಧನೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಸಿದ್ದೀಕ್, ಕಾರ್ಯದರ್ಶಿ ಎಸ್.ಎಸ್. ಶ್ರೀನಿವಾಸ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎಸ್. ಸುರೇಶ್, ಅಶ್ವತ್ಥನಾರಾಯಣ (ಮಣಿಕಂಠ), ಪತ್ರಕರ್ತರಾದ ಕರೀಂಸಾಬ್, ಗೋಪಾಲರೆಡ್ಡಿ, ಎ.ಜಿ. ನಾರಾಯಣಸ್ವಾಮಿ, ನಾಗರಾಜ್, ಬಾಬು, ರಂಗನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


















