Home ಜಿಲ್ಲೆ ಕಲಬುರಗಿ ಪ್ರತಿಯೊಬ್ಬ ಅರ್ಹ ನಾಗರಿಕ ಎಸ್‍ಐಆರ್‍ನಲ್ಲಿ ಪಾಲ್ಗೊಂಡು ಮತದಾನದ ಹಕ್ಕು ಕಾಪಾಡಿಕೊಳ್ಳಿ: ಶಾಸಕ ಅಲ್ಲಂಪ್ರಭು ಪಾಟೀಲ್

ಪ್ರತಿಯೊಬ್ಬ ಅರ್ಹ ನಾಗರಿಕ ಎಸ್‍ಐಆರ್‍ನಲ್ಲಿ ಪಾಲ್ಗೊಂಡು ಮತದಾನದ ಹಕ್ಕು ಕಾಪಾಡಿಕೊಳ್ಳಿ: ಶಾಸಕ ಅಲ್ಲಂಪ್ರಭು ಪಾಟೀಲ್

ಕಲಬುರಗಿ:ಜು.3:ಪ್ರಸ್ತುತ ಆರಂಭವಾಗಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯನ್ನು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಪರಿಗಣಿಸಿ ಅದನ್ನು ಲಕ್ಷವಹಿಸಿ ಪೂರ್ಣಗೊಳಿಸಬೇಕು, ಯಾವುದೇ ಅರ್ಹ ಮತದಾರರ ಹೆಸರು ಮತ ಪಟ್ಟಿಯಿಂದ ಕೈಬಿಡದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟಲ್ ಅರ್ಹ ಮತದಾರರಿಗೆ ಕಿವಿಮಾತು ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಶಾಸಕರು, ಈ ನಿರ್ಣಾಯಕ ತಿಂಗಳಿನಲ್ಲಿ ಕಲಬುರಗಿ ದಕ್ಷಿಣ ಸೇರಿದಂತೆ ಜಿಲ್ಲೆಯ ಎಲ್ಲಾ ಅರ್ಹ ಮತದಾರ ನಾಗರಿಕರು ಅತ್ಯಂತ ಜಾಗರೂಕರಾಗಿ ಮತ್ತು ಸಕ್ರಿಯರಾಗಿರಬೇಕು. ಮತದಾರರ ಪಟ್ಟಿಯಲ್ಲಿ ನಮ್ಮ ಸಾಂಸ್ಥಿಕ ವಿವರಗಳನ್ನು ದೋಷರಹಿತವಾಗಿ ನವೀಕರಿಸುವುದೇ ನಮ್ಮ ಮೂಲಭೂತ ಪ್ರಜಾಪ್ರಭುತ್ವದ ಹಕ್ಕನ್ನು ರಕ್ಷಿಸುತ್ತದೆ ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ನಾಗರಿಕರು, ವಿಶೇಷವಾಗಿ ನಮ್ಮ ಯುವಕರು ಮತ್ತು ಸಮಾಜದ ಎಲ್ಲಾ ವರ್ಗದವರು ಎಸ್‍ಐಆರ್‍ಗೆ ಪ್ರಥಮ ಆದ್ಯತೆ ನೀಡಬೇಕು. ವಿಳಂಬ ಮಾಡಬೇಡಿ. ನಿಗದಿತ ಗಡುವಿನೊಳಗೆ ನಿಮ್ಮ ಮತ ಮಾಹಿತಿ ಫಾರ್ಮ್ ಭರ್ತಿ ಮಾಡಿ ಹಿಂತಿರುಗಿಸಿ, ನಿಮ್ಮ ಮನೆಗೆ ಭೇಟಿ ನೀಡುವ ಬಿಎಲ್‍ಒ ಅವರಿಂದ ಅಧಿಕೃತ ಸ್ವೀಕೃತಿ ರಶೀದಿಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಿ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಎಸ್‍ಐಆರ್ ಫಾರಂ ಅನ್ನು ಪ್ರತಿಯೊಬ್ಬ ಮತದಾರರು ಸ್ವತಃ ಪರಿಶೀಲಿಸಿ ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು.
ತಮ್ಮ ಹೆಸರಿನ ಜೊತೆಗೆ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಯಾರ ಹೆಸರೂ ಅನಗತ್ಯವಾಗಿ ಕೈಬಿಡದಂತೆ ಜಾಗೃತಿ ವಹಿಸಬೇಕು

ಫಾರಂ ಭರ್ತಿ ಮಾಡುವ ಜವಾಬ್ದಾರಿಯನ್ನು ಇತರರ ಮೇಲೆ ಹಾಕದೆ ಸ್ವತಃ ಪರಿಶೀಲಿಸಿ ಸಲ್ಲಿಸಬೇಕು. ಹೆಸರು, ಜನ್ಮ ದಿನಾಂಕ, ವಿಳಾಸ, ಕುಟುಂಬದ ವಿವರ ಸೇರಿದಂತೆ ಯಾವುದೇ ಮಾಹಿತಿಯಲ್ಲಿ ತಪ್ಪು ಉಂಟಾದರೆ ಮುಂದೆ ಮತದಾರರ ಪಟ್ಟಿಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈ ಹಿಂದೆ ಕೆಲವೆಡೆ ಜಾಗೃತಿಯ ಕೊರತೆ ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದ ಅನೇಕ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವ ಉದಾಹರಣೆಗಳಿವೆ ಎಂದು ಅಲ್ಲಂಪ್ರಭು ಪಾಟಲರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ..

ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದು, ಅದನ್ನು ಕಾಪಾಡಿಕೊಳ್ಳಲು ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು . ಎಸ್‍ಐಆರ್ ಪ್ರಕ್ರಿಯೆ ನಡೆಯುವ ವೇಳೆ ಬಿಎಲ್‍ಓಗಳಿಗೆ ಅಗತ್ಯ ದಾಖಲೆ ಹಾಗೂ ಸಮರ್ಪಕ ಮಾಹಿತಿಯನ್ನು ಒದಗಿಸಿ ಪರಿಶೀಲನೆಗೆ ಸಹಕರಿಸಬೇಕು. ಪ್ರತಿಯೊಬ್ಬರೂ ತಮ್ಮ ಮತದಾರರ ಹಕ್ಕು ಸುರಕ್ಷಿತವಾಗಿರುವಂತೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದೂ ಶಾಸಕರಾದ ಅಲ್ಲಂಪ್ರಭು ಪಾಟೀಲರು ಕೋರಿದ್ದಾರೆ.