ಬೀದರ :ನ.30:ತಾಲೂಕಿನ ಗಾದಗಿ ಗ್ರಾಮ ಪಂಚಾಯಿತಿ ವತಿಯಿಂದ ಇಂದು ಮಕ್ಕಳ ಹಕ್ಕುಗಳ ಗ್ರಾಮ ಸಭೆ ಎಂಬ ವಿಶೇಷ ಗ್ರಾಮ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ಎಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪ್ರಕಾಶ್ ಗಾದಗಿ ಅವರು ತಿಳಿಸಿದರು.
ಪ್ರತಿಯೊಂದು ಮಗು ಉತ್ತಮ ಶಿಕ್ಷಣ ಪಡೆಯಬೇಕು, ಪೌಷ್ಟಿಕ ಆಹಾರ ಸೇವಿಸಬೇಕು, ಉತ್ತಮ ಆರೋಗ್ಯ ಹೊಂದಿರಬೇಕು, ಶುದ್ಧ ಪರಿಸರದಲ್ಲಿ ಬೆಳೆಯಬೇಕು ಹಾಗೂ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂಬುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಸರ್ಕಾರದಿಂದ ಜಾರಿಗೊಂಡಿರುವ ಮಕ್ಕಳ ಕಲ್ಯಾಣ ಯೋಜನೆಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶವೂ ಈ ಸಭೆಯ ಪ್ರಮುಖ ಅಂಶವಾಗಿತ್ತು.
ಸಭೆಯಲ್ಲಿ ಭಾಗವಹಿಸಿದ ಮಕ್ಕಳು ತಮ್ಮ ಸಮಸ್ಯೆಗಳು ಮತ್ತು ಅಹವಾಲುಗಳನ್ನು ವ್ಯಕ್ತಪಡಿಸಿದ್ದು, ಅಧ್ಯಕ್ಷರು ಸ್ಥಳದಲ್ಲಿಯೇ ಅವುಗಳಿಗೆ ಉತ್ತರ ನೀಡಿ ಸಾಧ್ಯವಾದ ಪರಿಹಾರಗಳನ್ನು ಸೂಚಿಸಿದರು.
ಈ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ ರೆಡ್ಡಿ, ಗ್ರಾಮ ಪಂಚಾಯತ್ ಸದಸ್ಯರು ವಿನೋದ, ಎಸ್‍ಡಿಎಂಸಿ ಅಧ್ಯಕ್ಷರಾದ ಸತೀಶ ಹಾಗೂ ಸದಸ್ಯರು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಕ್ಕಳ ಹಕ್ಕುಗಳ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಂಥಾಲಯ ಸಿಬ್ಬಂದಿ, ಊರಿನ ಮುಖಂಡರು ಹಾಗೂ ಡಾನ್ ಬಾಸ್ಕೋ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.























