ಹನುಮನಹಳ್ಳಿಯಲ್ಲಿ ಸಮಾನತೆಗೆ ಸಹ ಬೋಜನ

ಕೋಲಾರ,ಮೇ,೨೬-ಜಿಲ್ಲೆಯಲ್ಲಿ ಅರಿವು ಭಾರತ ನಡೆಸುತ್ತಿರುವ ಸಾಮಾಜಿಕ ಬದಲಾವಣೆಯ ಕೆಲಸಗಳು ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿಯಾಗಲಿವೆ, ಇಲ್ಲಿನ ಪ್ರಯೋಗಗಳನ್ನು ಮತ್ತಷ್ಟು ವಿಸ್ತರಿಸುವ ಕೆಲಸ ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.


ಮುಳಬಾಗಿಲು ತಾಲೂಕಿನ ಹನುಮನಹಳ್ಳಿಯಲ್ಲಿ ಶಿಕ್ಷಕ ಸುಬ್ರಮಣಿ ಮನೆಯಲ್ಲಿ ಸಮಾನತೆಗಾಗಿ ಸಹಭೋಜನ ಉದ್ಘಾಟಿಸಿ ಮಾತನಾಡಿ, “ಮನೆ ಪ್ರವೇಶ” ಮತ್ತು “ದೇವಾಲಯ ಪ್ರವೇಶ” ಕಾರ್ಯಕ್ರಮಗಳು ಹತ್ತು ವರ್ಷದಿಂದ ನಿರಂತರವಾಗಿ ನಡೆಯುತ್ತಿದ್ದು, ಈಗ ಅವುಗಳನ್ನು ಬೇರೆ ಬಗೆಯಲ್ಲಿ ವಿಸ್ತರಿಸುವ ಕೆಲಸ ಮಾಡಬೇಕಿದೆ. ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಏರ್ಪಡಿಸುವ ಮೂಲಕ ಬದಲಾವಣೆಯ ವೇಗವನ್ನು ಹೆಚ್ಚಿಸಬಹುದು ಎಂದು ಹೇಳಿದರು.


ಹನುಮನಹಳ್ಳಿಯ ವೀರಾಂಜನೇಯ ದೇವಾಲಯಕ್ಕೆ ಸರ್ವರಿಗೂ ಪ್ರವೇಶವಿದೆ ಎಂಬ ಬೋರ್ಡ್ ಹಾಕಿ ‘ಈ ದೇವಾಲಯ ಅಸ್ಪೃಶ್ಯತೆ ಮುಕ್ತ ದೇವಾಲಯ’ ಎಂದು ಘೋಷಿಸಿದರು, ಜಿಲ್ಲೆಯ ೧೩೦೦ ದೇವಾಲಯಗಳಿಗೂ ಬೋರ್ಡ್ ಅಳವಡಿಸುವ ಕೆಲಸವನ್ನು ಈಗ ಆರಂಭಿಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.


ನಿವೃತ್ತ ಜಿಲ್ಲಾಧಿಕಾರಿ ಶಾಂತರಾಜ್ ಮಾತನಾಡಿ, ಸ್ವತಂತ್ರ ಭಾರತವು ನಮ್ಮನ್ನು ಬದಲಾವಣೆಗೆ ಒತ್ತಾಯಿಸುತ್ತಿದೆ. ಇನ್ನು ತಡಮಾಡದೆ ಎಲ್ಲಾ ಬಾಗಿಲುಗಳು ಎಲ್ಲರಿಗೂ ತೆರೆಯಬೇಕು. ಇದು ಮಾನವೀಯ ಕೆಲಸ ಎಂದರು.


ಶಿಕ್ಷಣ ಪಡೆದವರು ಸಂವಿಧಾನ ಆಶಯಗಳನ್ನು ಪಾಲಿಸಬೇಕು. ತಾಲ್ಲೂಕಿನ ಎಲ್ಲಾ ದೇವಾಲಯಗಳನ್ನು ಅಸ್ಪೃಶ್ಯತೆ ಮುಕ್ತ ದೇವಾಲಯಗಳನ್ನಾಗಿಸಲು ಶ್ರಮಿಸುವುದಾಗಿ ತಹಶೀಲ್ದಾರ್ ವಿ.ಗೀತ ಹೇಳಿದರು. ನೆರೆದಿದ್ದ ಎಲ್ಲರಿಗೂ ಅವರು ಪ್ರತಿಜ್ಞೆ ಬೋಧಿಸಿದರು.


ಮೇಲಾಗಾಣಿ ಗ್ರಾಮದಲ್ಲಿ ಅಸ್ಪೃಶ್ಯತೆ ಸಡಿಲಗೊಂಡಿರುವುದನ್ನು ನೆನಪಿಸಿಕೊಂಡ ವಕೀಲ ಶ್ರೀನಿವಾಸರೆಡ್ಡಿ ಸಮಸಮಾಜದ ಕನಸನ್ನು ನನಸಾಗಿಸಲು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದರು.
ಜಿಪಂ ಮಾಜಿ ಸದಸ್ಯ ಅರವಿಂದ್ ಮಾತನಾಡಿ, ತಮ್ಮೂರಿನಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.


ದಲಿತ ಮುಖಂಡ ಟಿ.ವಿಜಯ ಕುಮಾರ್ ಮಾತನಾಡಿ, ಪ್ರೀತಿಯಿಂದಷ್ಟೇ ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯ. ಎಲ್ಲಾ ಜಾತಿಸಮುದಾಯಗಳ ಸಹಭಾಗಿತ್ವದಲ್ಲಿ ಈ ಕೆಲಸ ನಡೆಯಬೇಕು ಎಂದರು.
ಹನುಮನಹಳ್ಳಿ ಸುಬ್ರಮಣಿ ಮತ್ತು ನಲ್ಲೂರು ಸೋಮಪ್ಪರಿಗೆ ಇದೇ ಸಂದರ್ಭದಲ್ಲಿ ’ಗ್ರಾಮರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.


ಮುಜರಾಯಿ ತಹಶೀಲ್ದಾರ ಶ್ರೀನಿವಾಸರೆಡ್ಡಿ, ಜನಪ್ರಕಾಶನದ ರಾಜಶೇಖರ ಮೂರ್ತಿ, ಪರ್ವ ಫಿಲ್ಮ್ ವಿನಯ್, ಅರಿವು ಭಾರತ ತಂಡದ ಮುಖ್ಯಸ್ಥ ಡಾ.ಶಿವಪ್ಪ ಅರಿವು, ರಾಜಕಲ್ಲಹಳ್ಳಿ ಶ್ರೀನಿವಾಸ್, ನಾಗನಾಳ ರಮೇಶ್, ಕರಡುಬಂಡೆ ಮೂರ್ತಿ, ಕೊಂಡರಾಜನಹಳ್ಳಿ ಮಂಜುಳ, ವೆಂಕಟಾಚಲಪತಿ, ರಾಧಾಮಣಿ, ವಿ.ಜಿ.ಮಂಜುನಾಥ್, ಹನುಮನಹಳ್ಳಿ ಶ್ರೀನಿವಾಸ್, ಸುಬ್ರಮಣಿ, ಗೋವಿಂದಗೌಡ, ದಿಲೀಪ್, ಅದೀಪ್ ಮುಂತಾದವರಿದ್ದರು.