ಬೀದರ, ಅ.19: ಭವಿಷ್ಯದ ಪೀಳಿಗೆಗೆ ಪರಿಸರ ಸಂರಕ್ಷಣೆ ಅತ್ಯಗತ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ತಿಳಿಸಿದರು.
ಅವರು ಶನಿವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಂಡು 50 ವರ್ಷಗಳಾದ ಹಿನ್ನೆಲೆಯಲ್ಲಿ ‘ಸುವರ್ಣ ಮಹೋತ್ಸವ ‘ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂವಿಧಾನದ ಪ್ರತಿ ಬೋಧಿಸಿ ಮಾತನಾಡಿದರು.
ಶುದ್ಧ ಗಾಳಿ, ನೀರು, ಆಹಾರ ನೀಡುವುದರ ಮೂಲಕ ಭವಿಷ್ಯದ ಜನರಿಗೆ ಉತ್ತಮ ಆರೋಗ್ಯ ನೀಡುವುದು ನಮ್ಮ ಕರ್ತವ್ಯವಾಗಿದೆ ಇಂದಿನ ಜನರು ಎದರುಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಅದು ಜಾಗತಿಕ ತಾಪಮಾನ. ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ, ಅತಿಯಾದ ಇಂಧನಗಳ ಬಳಕೆ, ರಾಸಾಯನಿಕ ಕೈಗಾರಿಕೆಗಳಿಂದ ಘನ ವಾಯು ಸೋಸುವಿಕೆಯಿಂದಾಗಿ ತಾಪಮಾನ ಹೆಚ್ಚಳ ಆಗುತ್ತಿದೆ. ಏಕ ಬಳಿಕ ಪ್ಲಾಸ್ಟಿಕ್ ಬಳಕೆ ಮಾಡಬಾರದು ಘನತ್ಯಾಜ್ಯ ಸಂಸ್ಕರಿಸಿ ಅದನ್ನು ಮರುಬಳಕೆ ಮಾಡುವ ಕ್ರೀಯಾ ಯೋಜನೆ ಹಾಕಬೇಕು. ಸ್ವಚ್ಛ ಬೀದರ, ಸುಂದರ ಬೀದರ, ನಿರ್ಮಲ ಬೀದರ ಮಾಡೊಣ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1973ರಲ್ಲಿ ಹುಲಿಗಳ ಸಂರಕ್ಷಣೆಗೆ ಟೈಗರ್ ಪ್ರಾಜೆಕ್ಟ್, 1974ರಲ್ಲಿ ಜಲ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರು. ಜಲ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸ್ಥಾಪಿಸಲಾಯಿತು. ಘನತ್ಯಾಜ್ಯ, ಇ-ತ್ಯಾಜ್ಯ, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯಗಳನ್ನು ನಿಯಂತ್ರಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲಾಗುವುದು ತಮ್ಮ ಮುಖ್ಯ ಗುರಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಪರಿಸರವಾದಿಗಳಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣುಕುಮಾರ ಎಂ. ಮೋದಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆ ಅಧ್ಯಕ್ಷರಾದ ಬಾಬು ಹೊನ್ನನಾಯ್ಕ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ , ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಲಯ ಕಛೇರಿ ಕಲಬುರಗಿಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳಿಧರ, ಬೀದರ ಪ್ರಾದೇಶಿಕ ಪರಿಸರ ಅಧಿಕಾರಿ ಮೃತ್ಯುಂಜಯ ಬಿ.ಬಸನಕೊಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

























