ಮನು ಕುಲದ ಉಳಿವಿಗಾಗಿ ಪರಿಸರ ಸಂರಕ್ಷಣೆ ಅವಶ್ಯ: ವನಿತಾ

ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.೧೧: ಮನುಕುಲದ ಉಳಿವಿಗಾಗಿ ಪರಿಸರದ ಸಂರಕ್ಷಣೆಯು ಅತ್ಯವಶ್ಯಕವಾಗಿದೆ ಎಂದು ವಿಜಯಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ಆರ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿಶೇಷವಾಗಿ ವಿದ್ಯಾರ್ಥಿನಿಯರು ತಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರಣ್ಯ ಇಲಾಖೆ ನಗರದಲ್ಲಿ ಕೈಗೊಂಡಿರುವ ಪರಿಸರ ಸ್ನೇಹಿ ಕಾರ್ಯಗಳಾದ ‘ಕೋಟಿ ವೃಕ್ಷ ಆಂದೋಲನ’ ಹಾಗೂ ಸಾರ್ವಜನಿಕರಿಗೆ ಮೊಳಕೆ ಸಸಿಗಳ ವಿತರಣೆ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ಹಸಿರಿಲ್ಲದೆ ಉಸಿರಿಲ್ಲ” ಎಂಬ ನುಡಿಯನ್ನು ಉಲ್ಲೇಖಿಸಿ, ಪರಿಸರ ದಿನಾಚರಣೆಗಷ್ಟೆ ಸಸಿಗಳನ್ನು ನೆಡುವುದನ್ನು ಸೀಮಿತಗೊಳಿಸದೇ, ಅವುಗಳನ್ನು ಪೋಷಿಸಿ ಬೆಳಸಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿನಿಯರಿಗೆ ಪರಿಸರದ ಬಗೆಗಿನ ಜ್ಞಾನವನ್ನು ರಸಪ್ರಶ್ನೆ ಮುಖಾಂತರ ಕೇಳಿ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ. ಮಾತನಾಡಿ, ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹಸಿರೀಕರಣ ಪ್ರಯತ್ನಗಳನ್ನು ನೆನಪಿಸಿಕೊಂಡರು. ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ವತಿಯಿಂದ ಪ್ರತೀ ವರ್ಷ ೫೦೦ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿರುವುದು ಶ್ಲಾಘನೀಯವೆಂದು ಪ್ರಶಂಸಿಸಿದರು. ವಿವಿಯ ಆವರಣದಲ್ಲಿ ವಿಶೇಷ ಸಸಿಗಳ ಸಸ್ಯೋದ್ಯಾನ ಸ್ಥಾಪಿಸಲು ಅಗತ್ಯ ನೆರವನ್ನು ಅರಣ್ಯ ಇಲಾಖೆ ನೀಡಬೇಕೆಂದು ಕೋರಿದರು. ಪ್ರತಿಯೊಬ್ಬರೂ ತಮ್ಮ ಹೆಸರಿನಲ್ಲಿ ಒಂದು ಸಸಿಯನ್ನು ನೆಟ್ಟು, ಪೋಷಿಸಿ, ಮುಂದಿನ ಪೀಳಿಗೆಗೆ ಶಾಶ್ವತ ಹಸಿರಾದ ಕೊಡುಗೆಯನ್ನಾಗಿ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್.ಚಂದ್ರಶೇಖರ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಲಕ್ಷೀದೇವಿ ವಾಯ್, ವಿಭಾಗದ ಅಧ್ಯಾಪಕಿ ಡಾ.ಫಿರದೋಸ್ ಕೋಲ್ಹಾರ್, ವಿದ್ಯಾರ್ಥಿನಿಯರು ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಸ್ಯಶಾಸ್ತç ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ಪೋಸ್ಟರ್ ಹಾಗೂ ರಸಪ್ರಶ್ನೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಭಾಗದ ಸಂಯೋಜಕ ಡಾ.ನಟರಾಜ ದುರ್ಗಣ್ಣವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಆರತಿ ನಿರೂಪಿಸಿದರು. ಡಾ.ಪ್ರತಿಮಾ ಎಚ್ ಅತಿಥಿಗಳನ್ನು ಪರಿಚಯಿಸಿದರು. ಡಾ.ಅಜಯನ್ ಕೆ.ವಿ. ವಂದಿಸಿದರು.