
ಬೀದರ್: ಜೂ.೨೫:ಬಸವಾದಿ ಶರಣರ ವಚನಗಳಲ್ಲಿ ಪರಿಸರ ಪ್ರಜ್ಞೆ ತುಂಬಿ ತುಳುಕುತ್ತಿದೆ ಎಂದು ಶಿಕ್ಷಕ ಡಾ. ಶಿವಲಿಂಗ ಹೇಡೆ ಹೇಳಿದರು.
ಲಿಂಗಾಯತ ಮಹಾ ಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಸೋಮವಾರ ನಡೆದ ೨೬೪ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಶರಣರು ಮತ್ತು ಪರಿಸರ’ ಕುರಿತು ಅವರು ಉಪನ್ಯಾಸ ನೀಡಿದರು.
ಶರಣರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದರು. ಪಶು, ಪ್ರಾಣಿ, ಕ್ರಿಮಿ ಕೀಟ, ಸಸ್ಯ ಸಂಕುಲ ಸಮತೋಲನದಿಂದಿದ್ದರೆ ಜಗತ್ತು ಚೆನ್ನಾಗಿರುತ್ತದೆ. ಪರಿಸರ ಉತ್ತಮವಾಗಿದ್ದರೆ ಮಾತ್ರ ಎಲ್ಲರೂ ಸುಖವಾಗಿ ಬಾಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು ಎಂದು ತಿಳಿಸಿದರು.
ಪರಿಸರದ ಮೇಲೆ ಮಾನವನ ದೌರ್ಜನ್ಯ ನಿಲ್ಲಬೇಕು. ಪಂಚಭೂತಗಳು ದೇವರ ಭಿಕ್ಷೆ. ಅವುಗಳನ್ನು ಕಲುಷಿತಗೊಳಿಸುವುದು ಮನುಷ್ಯನಿಗೆ ಸಲ್ಲದೆಂದರು ಎಂದು ಹೇಳಿದರು.
ಬಸವಣ್ಣ ಒಂದು ಜೀವಿಗೂ ತೊಂದರೆ ಕೊಡಲಾರೆನೆಂದರು. ಕೊಲ್ಲೆನಯ್ಯ, ಮೆಲ್ಲೆನಯ್ಯ ಎಂದು ದಯವೇ ಧರ್ಮದ ಮೂಲವೆಂದರು. ಭಯದ ಧರ್ಮ ಬೇಡವೆಂದರು ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಸಸ್ಯಗಳಲ್ಲಿಯೂ ಜೀವ ಇದೆ ಎಂದು ಶರಣರು ೯೦೦ ವರ್ಷಗಳ ಹಿಂದೆಯೇ ಕಂಡುಕೊAಡಿದ್ದರು. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭುದೇವರು ಸೇರಿದಂತೆ ಅನೇಕ ಶರಣರು ಪ್ರಕೃತಿ, ಗಿಡ-ಮರಗಳ ಕುರಿತು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಅವುಗಳನ್ನು ಇಂದು ನಾವು ತಿಳಿದುಕೊಂಡು ಅನುಸರಿಸಬೇಕಿದೆ ಎಂದು ಹೇಳಿದರು.
ಎಲ್ಲರೂ ಪರಿಸರ ಉಳಿಸುವ ಪಣ ತೊಡಬೇಕು. ಒಬ್ಬ ವ್ಯಕ್ತಿ ವರ್ಷಕ್ಕೆ ಒಂದು ಸಸಿಯಾದರೂ ನೆಟ್ಟು ಬೆಳೆಸಬೇಕು. ಆಗ ಜಗತ್ತು ಸುಂದರವಾಗುತ್ತದೆ ಎಂದು ತಿಳಿಸಿದರು.
ಮಹಾ ಮಠದಿಂದ ಆರಂಭಿಸಿರುವ ಹಸಿದವರಿಗೆ ಅನ್ನ ಕೊಡುವ ಅನ್ನಪೂರ್ಣ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಯೋಜನೆಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಮೋಳಕೇರಿ ಉದ್ಘಾಟಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಹುದ್ದೆಯಿಂದ ನಿವೃತ್ತರಾದ ಮಲ್ಲಿಕಾರ್ಜುನ ಮೋಳಕೇರಿ, ಶಿಕ್ಷಕ ವೈಜಿನಾಥ ಹುಣಚಗೇರಿ, ಕರ್ನಾಟಕ ಸಿವಿಲ್ ಎಂಜಿನಿಯರ್ಸ್ ಪರಿಷತ್ ಸದಸ್ಯರಾಗಿ ನೇಮಕಗೊಂಡ ಹಾವಶೆಟ್ಟಿ ಪಾಟೀಲ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಶಿವಲಿಂಗ ಹೇಡೆ ಅವರಿಗೆ ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು.
ನೀಲಮ್ಮನ ಬಳಗದ ಸಹೋದರಿಯರು ಪ್ರಾರ್ಥನೆ ನಡೆಸಿಕೊಟ್ಟರು. ಪರುಷಕಟ್ಟೆಯ ಚನ್ನಬಸವಣ್ಣ, ಶ್ಯಾಮಲಾ ಎಲಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು.
ಮಾಣಿಕಪ್ಪ ಗೋರನಾಳೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಮೇಶ ಮಠಪತಿ ಉಪಸ್ಥಿತರಿದ್ದರು. ಚನ್ನಬಸಪ್ಪ ಹಂಗರಗಿ ಸ್ವಾಗತಿಸಿದರು. ಜಗದೇವಿ ಜಗನ್ನಾಥ ಚಿಮಕೋಡೆ ಗುರುಪೂಜೆಗೈದು, ಭಕ್ತಿ ದಾಸೋಹಗೈದರು.