ವನ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಿದಲ್ಲಿ ಪರಿಸರ ಸಂರಕ್ಷಣೆ ಸಾಧ್ಯ: ಶಿವಕುಮಾರ ರಾಠೋಡ್

ಬೀದರ್: ಜೂ.6:ವನ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಿದಲ್ಲಿ ಪರಿಸರ ಸಂರಕ್ಷಣೆ ಸಾಧ್ಯವಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಸಂರಕ್ಷಣಾಧಿಕಾರಿ ಶಿವಕುಮಾರ ರಾಠೋಡ್ ಹೇಳಿದರು.
ಗುರುವಾರ ನಗರದ ಸರಸ್ವತಿ ಶಾಲೆಯಲ್ಲಿ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಮತ್ತು ಅಲ್ಲಿಯ ಹಳೆ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು, ಅವನ್ನು ಪೋಷಿಸಬೇಕು. ಅವುಗಳ ಸಂರಕ್ಷಣೆ ಜವಾಬ್ದಾರಿ ಹೋರಬೇಕು. ಪ್ರಕೃತಿಯನ್ನು ಆರಾಧಿಸಿದಲ್ಲಿ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ಪರಿಸರ ಉಳಿಯಬೇಕಾದರೆ ವನ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲವನ್ನು ಅಭಿವೃದ್ಧಿಪಡಿಸಬೇಕು. ಬೃಹತ್ ನಗರಗಳು ಬೆಳೆದು ಇಂದು ಅರಣ್ಯ ಸಂಪತ್ತು ಕ್ಷೀಣಿಸತೊಡಗಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ವಾಯು ಬ್ಯಾಗ್‍ಗಳನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡುವ ಕಾಲ ದೂರವಿಲ್ಲವೆಂದು ಎಚ್ಚರಿಸಿದರು.
ಇಂದು ಡಿನೋಟಿಪಿಕೆಶನ್ ಪ್ರಭಾವದಿಂದ ಶ್ರೀಮಂತರು ಪರಿಸರ ನಾಶ ಮಾಡಿ ಜಮಿನು ಮಾರಿ ಪ್ಲಾಟ್ ಹಾಕಿ ಮಾರಿ ಹಣ ಗಳಿಸುವ ಗೋಜಿಗೆ ಜಾರುತ್ತಿರುವರು. ಗಿಡವೇ ಇಲ್ಲದಾದಾಗ ಆಮ್ಲಜನಿಕ ಇಲ್ಲವಾದರೆ ಹಣ ತಗೊಂಡು ಏನು ಮಾಡಬೇಕು? ಎಂದು ಪ್ರಶ್ನೆ ಮಾಡಿದರು.
ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ.ಎಸ್.ಬಿ.ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಸರ್ಗವು ನಮಗೆ ಎಲ್ಲವನ್ನು ಉಚಿತವಾಗಿ ನೀಡುತ್ತದೆ. ಗಾಳಿ, ನೀರು ಹಾಗೂ ಆಹಾರ ಕೊಡುತ್ತದೆ. ಅದಕ್ಕೆ ಪ್ರತಿಯಾಗಿ ನಾವು ಎನನ್ನೆ ನೀಡದೇ ಇದ್ದರೂ ಅದನ್ನು ಕಾಪಾಡುವ ಮಹತ್ವದ ಹೊಣೆ ನಮ್ಮದು. ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ನಾವು ನಿಸರ್ಗ ಆರಾಧಕರು. ಅನೇಕ ಗಿಡ, ಮರಗಳು ಪರಿಸರದ ಅನೇಕ ಅಂಶಗಳು ಪೂಜ್ಯನಿಯವಾಗಿವೆ. ಆದ್ದರಿಂದ ಅವುಗಳನ್ನು ಸಂರಕ್ಷಿಸಲು ಕರೆ ನೀಡಿದ ಅವರು, ಇಂದು ಪ್ಲಾಸ್ಟಿಕ್ ಬಳಿಕೆ ಹೆಚ್ಚಾಗಿರುವುದರಿಂದ ಮಾಲಿನ್ಯ ಉಂಟಾಗಿ ಬಹುತೇಕರಿಗೆ ಕ್ಯಾನ್ಸರ್ ಆವರಿಸುತ್ತಿದೆ. ಪ್ಲಾಸ್ಟಿಕ್ ಬಳಿಕ ಶುನ್ಯವಾಗಿಸಲು ಎಲ್ಲರು ಪ್ರತಿಜ್ಞೆ ಮಾಡಬೇಕೆಂದು ಕರೆ ಕೊಟ್ಟರು.
ಶಾಲೆಯ ಹಿರಿಯ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಭಾಗವಹಿಸಿದ ಶಿವಾನಂದ ಗಾದಗಿ ಮಾತನಾಡಿ, ಎಲ್ಲೆಡೆ ಸಸಿಗಳು ಬೆಳೆಸಿ ಪರಿಸರ ಹಸಿರಾಗಿ, ಅದು ಉಸಿರಾಗಬೇಕೆಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ನಾಗೇಶ ರಡ್ಡಿ, ಶಾಲೆಯ ಮುಖ್ಯ ಗುರು ಪ್ರತಿಭಾ ಚಾಮಾ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಪ್ರೊ.ವೀಣಾ ಜಲಾದೆ ವೇದಿಕೆಯಲ್ಲಿದ್ದರು.
ಇದೇ ವೇಳೆ ಶಾಲೆಯ ಪರಿಸರದಲ್ಲಿ ಸಸಿಗಳನ್ನು ನೆಡಲಾಯಿತು ಜೊತೆಗೆ ಅಲ್ಲಿಯ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಸಿಗಳನ್ನು ವಿತರಿಸಲಾಯಿತು.
ಶಾಲೆಯ ಶಿಕ್ಷಕ ಬಾಲಾಜಿ ರಾಠೋಡ್ ಕಾರ್ಯಕ್ರಮ ನಿರೂಪಿಸಿ, ಪುಷ್ಪಕ ಜಾಧವ್ ಸ್ವಾಗತಿಸಿ, ಶಿವಪುತ್ರ ನೇಳಗೆ ವಂದಿಸಿದರು.