ಉತ್ಸಾಹ ಕಲ್ಲಿದ್ದಲೊಳಗೆ ಕುದಿಯುತ್ತಿರುವ ಕಾವು ಆಗಿರಬೇಕು:ಪ್ರೊ;ಬಸವರಾಜ ಜಾಲವಾದಿ

ಕೊಲ್ಹಾರ: ನ.೧೨:ಇತರರೊಡನೆ ಹೋಲಿಸಿಕೊಳ್ಳುವ ಬದಲು, ನಮ್ಮ ಅನನ್ಯತೆಯನ್ನು ಅಪ್ಪಿಕೊಂಡು, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವುದಾಗಬೇಕು.ಎಂದು ಸಮಾಜಶಾಸ್ತ್ರದ ಪ್ರೊ; ಬಸವರಾಜ ಜಾಲವಾದಿ ಹೇಳಿದರು.
ಅವರು ಸರ್ಕಾರಿ ಪದವಿಪೂರ್ವ ಕಾಲೇಜು ಕೂಡಗಿಯಲ್ಲಿ ಏರ್ಪಡಿಸಿದ ಸಮಾಜಶಾಸ್ತ್ರದ ಒಂದು ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು.
ನಮ್ಮ ತನವನ್ನು ಬೆಳೆಸಿಕೊಳ್ಳಬೇಕು. ನಮ್ಮ ಶಕ್ತಿ-ದುರ್ಬಲತೆಗಳ ಸ್ಪಷ್ಟ ಅರಿವೇ ಯಶಸ್ವಿ ಬದುಕಿನ ನಿಜವಾದ ಗುಟ್ಟು.
ಕೆಟ್ಟ ನೆನಪುಗಳು ಹೊತ್ತು ತಿರುಗಿದಷ್ಟೂ ಭಾರ. ಅವುಗಳನ್ನು ಸುಟ್ಟುಬಿಡಬೇಕು. ಉತ್ಸಾಹವೆಂಬುದು ಕಲ್ಲಿದ್ದಲ ಒಳಗಿನ ಕುದುಯುತ್ತಿರುವ ಕಾವು ಆಗಬೇಕೇ ವಿನಃ ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕನ್ನೂರ ಸರ್ಕಾರಿ ಪದವಿಪೂರ್ವ ಕಾಲೇಜಿನ ಡಾ//ರೂಪಾ ಜೋಗುಳೇಕರ್ ಮಾತನಾಡಿ ದಿನ ಬೆಳಗಾಯ್ತಂದರೆ ಹೊಸ ಪ್ರಯೋಗಕ್ಕೆ ಸಜ್ಜಾಗಿದ್ದೇವೆ ಎಂದೇ ಅರ್ಥ. ಯಶಸ್ವಿಯಾದರೆ ಖುಷಿಪಡಿ, ಸೋತರೆ ಮರುದಿನ ಹೊಸ ಪ್ರಯೋಗಕ್ಕೆ ಸಜ್ಜಾಗಿ, ಅಷ್ಟೇ!
ನಿಮ್ಮ ಕೋಣೆಯಲ್ಲಿ ನಿಮಗೆ ಕಾಣುವಂತೆ ದೊಡ್ಡದಾಗಿ ಬರೆದಿಟ್ಟುಕೊಳ್ಳಿ, ಒಂದು ದಿನ ಅಂದುಕೊAಡಿದ್ದನ್ನು ಖಂಡಿತವಾಗಿ ಸಾಧಿಸುವೆ.
ಜ್ಞಾನದ ದೊಡ್ಡ ಶತ್ರು ಅಜ್ಞಾನವಲ್ಲ ನಾನೇ ಜ್ಞಾನಿ ಎಂಬ ಭ್ರಮೆ.* ಭ್ರಮೆಯಲ್ಲಿ ಬದುಕದೆ ಅದನ್ನು ಪರೀಕ್ಷೆಯಲ್ಲಿ ತೋರಿಸಿಕೊಡಿ ಎಂದು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜು ವಿಜಯಪುರದ ಪ್ರೊ; ಶಿವಾನಂದ ಧನ್ಯಾಳ ಮಾತನಾಡಿ
ಸಾಧನೆಯ ಗೆಲುವು ದುಡಿಯುವ ಕೈಗಳಿಂದ ಬರುತ್ತದೆಯೆ ಹೊರತು, ಅಂಗೈಯ ಅದೃಷ್ಟ ರೇಖೆಗಳಿಂದಲ್ಲ.
ದುಡಿಮೆ ಯಾವ ವ್ಯಕ್ತಿಯನ್ನೂ ವಂಚಿಸುವುದಿಲ್ಲ ಆದರೆ ವ್ಯಕ್ತಿಯೇ ದುಡಿಮೆಗೆ ವಂಚನೆ ಮಾಡುತ್ತಾನೆ.
ಬಲಿಯಾಗ್ತಿರೋ ಅಥವಾ, ಬಲಶಾಲಿಯಾಗ್ತಿಯೋ, ಆಯ್ಕೆ ನಿಮಗೆ ಬಿಟ್ಟದ್ದು . ಪರೀಕ್ಷೆಗಳು ಸಮೀಪಿಸುತ್ತಿದ್ದು ಸದಾ ಪರೀಕ್ಷೆಯ ಬಗ್ಗೆ ಚಿಂತಿಸುತ್ತಿದ್ದರೆ ನೀವು ಖಂಡಿತ ಸಾಧನೆ ಮಾಡುತ್ತೀರಿ ಎಂದರು.
ವೇದಿಕೆಯ ಮೇಲೆ ಪ್ರಾಚಾರ್ಯ ಕೆ. ಜಿ. ಲಮಾಣಿ,ಪ್ರೊ ;ಎಸ ಬಿ ದೇಸಾಯಿ ಪ್ರೊ ;ವ್ಹಿ. ಜಿ. ಕಿವುಡಜಾಡರ್, ಗಣಕಯಂತ್ರ ಶಿಕ್ಷಕ ಮಹಾಂತೇಶ್ ಪಾಟೀಲ್ ರಾಜೇಶ್ವರಿ ಜಾಧವ್ ಹಾಜರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಈರ್ವರೂ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.ಲಕ್ಷ್ಮಿ ಹಳಿಜೋಳ ಸ್ವಾಗತಸಿದರು, ರೇಖಾ ಜಲದಿ ಪ್ರಾರ್ಥಿಸಿದರು, ಶಿವನಗೌಡ ಪಾಟೀಲ್ ವಂದಿಸಿದರು.