ದೇಶದ ಅಭಿವೃದ್ಧಿಯಲ್ಲಿ ಅಭಿಯಂತರರ ಶ್ರಮ ಅಪಾರ : ಶಾಸಕ ಲಕ್ಷ್ಮಣ ಸವದಿ

ಅಥಣಿ : ಸೆ.21:ದೇಶ ಕಟ್ಟುವಲ್ಲಿ ಅಭಿಯಂತರರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರಾಚೀನ ಕಾಲದಿಂದಲ್ಲಿ ತಾಂತ್ರಿಕತೆ, ಯಂತ್ರಗಳ ಬಳಕೆ ಇರಲಿಲ್ಲ ಆದರೆ ನಮ್ಮ ದೇಶದಲ್ಲಿ ಅನೇಕ ಅದ್ಭುತ ವಿಶ್ವ ವಿಖ್ಯಾತ ಐತಿಹಾಸಿಕ ಕಟ್ಟಡಗಳನ್ನು ನಿರ್ಮಿಸಿ ಆ ಕಟ್ಟಡಗಳು ಇಂದಿನ ಪಿಳಿಗೆಗೆ ಪರಿಚಯಿಸಿದ ಕೀರ್ತಿ ಅಂದಿನ ಅಭಿಯಂತರರಿಗೆ ಸಲ್ಲುತ್ತದೆ ಎಂದರು.
ಅವರು ಸರ್ ಎಮ್.ವಿಶ್ವೇಶ್ವರಯ್ಯ ಜನ್ಮ ದಿನದ ಅಂಗವಾಗಿ ಅಥಣಿ ತಾಲೂಕಾ ಇಂಜನೀಯರ್ಸ ಮತ್ತು ಗುತ್ತಿಗೆದಾರರ ಅಸೋಸಿಯೇಷನ್ ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಇಂಜನೀಯರ್ಸ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಥಣಿ ಪೂರ್ವ ಭಾಗಕ್ಕೆ ನೀರಾವರಿ ಒದಗಿಸುವ ಕರಿ ಮಸೂತಿ ಏತ ನೀರಾವರಿ ಯೋಜನೆ ಹಿಡಿದು ಇಲ್ಲಿಯವರೆಗಿನ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ವರೆಗೂ ನೂರಾರು ಅಭಿಯಂತರರು ಅತ್ಯಂತ ಅಚ್ಚು ಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಹಿಂದಿಗೂ ಅನೇಕ ಯೋಜನೆಗಳ ಅನುಷ್ಢಾನದಲ್ಲಿಯೂ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಎಂದು ಹೇಳಿದರು
ಭಾರತ ರತ್ನ ಸರ್.ಎಮ್.ವಿಶ್ವೇಶ್ವರಯ್ಯ ಇಂದಿನ ಮತ್ತು ಮುಂದಿನ ಪಿಳಿಗೆಯ ಎಲ್ಲ ಅಭಿಯಂತರರಿಗೆ ಮಾರ್ಗದರ್ಶಕರಾಗಿದ್ದು, ಅವರ ಆದರ್ಶ, ಸಾಧನೆ, ನಿಷ್ಠೆಯನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು ವಿಶ್ವೇಶ್ವರಯ್ಯನವರು ಅಂದಿನ ದಿನದ ತಾಂತ್ರಿಕತೆಯನ್ನು ಬಳಸಿಕೊಂಡು ಕನ್ನಂಬಾಡಿಯಲ್ಲಿ ಕೆ.ಆರ್.ಎಸ್ ಡ್ಯಾಮ್ ಕಟ್ಟಿದರು. ಈ ಡ್ಯಾಮ ನಿರ್ಮಾಣದಿಂದಲೇ ಮೈಸೂರು, ಮಂಡ್ಯ ಜಿಲ್ಲೆಗಳ ರೈತರ ಜಮೀನುಗಳಿಗಷ್ಟೇ ಅಲ್ಲ ಅನೇಕ ಲಕ್ಷಾಂತರ ಜನರ ಕುಡಿಯುವ ನೀರಿಗೂ ಅನಕೂಲವಾಗಿದೆ ಎಂದ ಅವರು
ಇಂಜನೀಯರ್ಸ ದಿನದ ಅಂಗವಾಗಿ ಮೋಜು, ಮಜಾ, ಮಸ್ತಿ ಮಾಡದೇ ಉಪನ್ಯಾಸ, ರಚನಾತ್ಮಕ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಅಥಣಿ ಅಭಿಯಂತರರನ್ನು ಮತ್ತು ಗುತ್ತಿಗೆದಾರರನ್ನು ಲಕ್ಷ್ಮಣ ಸವದಿ ಅಭಿನಂದಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಧಾರವಾಡ ಐಐಟಿ ಉಪನ್ಯಾಸಕ ಡಾ. ಅನಿಕೇತ ಕಟವರೆ ಮಾತನಾಡಿ, ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಲಕ್ಷಾಂತರ ಅಭಿಯಂತರರ ನಿರಂತರ ಪರಿಶ್ರಮದ ಫಲದಿಂದಲೇ 2024 ರ ಅಂತ್ಯಕ್ಕೆ 6.7 ಮಿಲಿಯನ್ ಕಿಲೋ ಮೀಟರ್ ಅಥವಾ 67 ಲಕ್ಷ ಕಿಲೋ ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ ಎಂದ ಅವರು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಮಣ್ಣಿನ ಪ್ರಮಾಣ ಹೆಚ್ಚಾಗಿದೆ ಹೀಗಾಗಿ ರಸ್ತೆಗಳು ಅವಧಿಗೆ ಮೊದಲೇ ಕೆಡುವ ಸಾಧ್ಯತೆ ಹೆಚ್ಚಾಗಿದ್ದರಿಂದ ಅಭಿಯಂತರರು ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ರಸ್ತೆ ನಿರ್ಮಿಸಬೇಕು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕಿವಿ ಮಾತು ಹೇಳಿದ ಅವರು ಇತ್ತೀಚಿಗೆ ಎ.ಐ. ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು
ಪ್ರಸ್ತಾವಿಕವಾಗಿ ಜಿಲ್ಲಾ ಪಂಚಾಯತ ಉಪ ವಿಭಾಗದ ಅಭಿಯಂತರ ವ್ಹಿ. ಎ. ವಾಲಿ ಮಾತನಾಡಿದರು.
ಗ್ರಾಮೀಣ ಕುಡಿಯುವ ನೀರು ಇಲಾಖೆಯ ರವೀಂದ್ರ ಮುರಗಾಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತನ ವೀರಣ್ಣಾ ವಾಲಿ, ನೀರಾವರಿ ನಿಗಮದ ಪ್ರವೀಣ ಹುಣಸಿಕಟ್ಟಿ, ಹೆಸ್ಕಾಂ ಅಥಣಿ ವಿಭಾಗದ ಗುರುರಾಜ ಸಂಪಣ್ಣವರ, ಗುತ್ತಿಗೆದಾರರಾದ ಶಿವಲಿಂಗ ಗಲಗಲಿ, ಬಿ.ಎಮ್.ಪಾಟೀಲ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀರಾವರಿ ನಿಗಮದ ನಾಗರಾಜ ಬಿ.ಎ. ವಹಿಸಿದ್ದರು, ವೇದಿಕೆಯಲ್ಲಿ ಅಸೋಸಿಯೇಷನ್ ನ ರಾಜು ಆಲಬಾಳ, ರಾಜಶೇಖರ ಟೊಪಗಿ, ಸಂಜೀವ ಕುಲಕರ್ಣಿ, ಶ್ರೀಧರ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಸಂಗಮೇಶ ಹಚಡದ ನಿರೂಪಿಸಿ, ವಂದಿಸಿದರು.

#

ಅಥಣಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಗುರಿ ಇದ್ದು. ಅದಕ್ಕೆ ಈಗಾಗಲೇ 50 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಸೂಕ್ತ ಸಮಯದಲ್ಲಿ ಕಾಲೇಜು ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗುವುದು. ಅನೇಕ ವರ್ಷಗಳಿಂದ ಅಥಣಿ ತಾಲೂಕಿನ ಅಭಿಯಂತರರು ಮತ್ತು ಗುತ್ತಿಗೆದಾರರು ಇಂಜನೀಯರ್ಸ ಭವನ ನಿರ್ಮಾಣಕ್ಕಾಗಿ ಬೇಡಿಕೆ ಇಟ್ಟಿದ್ದು, ಇದಕ್ಕಾಗಿ ತನು, ಮನ, ಧನದಿಂದ ಸಹಕಾರ ನೀಡುತ್ತೇನೆ

          ಲಕ್ಷ್ಮಣ ಸವದಿ. ಶಾಸಕ