ಸತ್ಯಕ್ಕಾಗಿ ಹೋರಾಡಿದವರ ರಕ್ಷಣೆಗಾಗಿ ವಿಶೇಷ ಕಾಯ್ದೆ ರೂಪಿಸಿ: ವಡಗಾಂವ

ಆಳಂದ:ಡಿ.6: ರಾಜ್ಯದಾದ್ಯಂತ ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ, ವಿಶೇಷವಾಗಿ ಯಡ್ರಾಮಿ ತಾಲೂಕಿನಲ್ಲಿ ವರದಿಗಾರ ಪ್ರಶಾಂತ್ ಚವಾಣ್ ಹಾಗೂ ಅವರ ಕುಟುಂಬದ ಮೇಲೆ ನಡೆದ ಭೀಕರ ದಾಳಿಯನ್ನು ವಿರೋಧಿಸಿ ಆಳಂದ ಪಟ್ಟಣ ಹೊರವಲಯದ ತಾಲೂಕು ಆಡಳಿತ ಸೌಧ ಕಚೇರಿ ಎದುರು ಶುಕ್ರವಾರ ಪತ್ರಕರ್ತರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ್ ಅವರು ಆಕ್ರೋಶ ವ್ಯಕ್ತಪಡಿಸಿ, “ಭ್ರμÁ್ಟಚಾರದಿಂದ ಆರಂಭಿಸಿ ದೌರ್ಜನ್ಯವರೆಗೆ ಎಲ್ಲ ಅಕ್ರಮಗಳ ವಿರುದ್ಧ ಕೊನೆಯ ಹೋರಾಟಗಾರ ಪತ್ರಕರ್ತನೇ. ಆದರೆ ಇಂದು ಸತ್ಯವನ್ನು ಬೆಳಕಿಗೆ ತರುವವರೇ ಗುರಿಯಾಗುತ್ತಿದ್ದಾರೆ. ಇದು ಪತ್ರಕರ್ತರಿಗμÉ್ಟೀ ಅಲ್ಲ, ಪ್ರಜಾಪ್ರಭುತ್ವದ ಸ್ವರಕ್ಕೆ ನೀಡುವ ಬೆದರಿಕೆಯಾಗಿದೆ” ಎಂದು ಹೇಳಿದರು.
ಯಡ್ರಾಮಿ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, “ಒಬ್ಬ ಗ್ರಾಮೀಣ ಪತ್ರಕರ್ತನ ಮನೆಗೆ ನುಗ್ಗಿ, ಮಕ್ಕಳ ಕಣ್ಣ ಮುಂದೆ ತಂದೆಯನ್ನು ಥಳಿಸುವ ಮಟ್ಟಕ್ಕೆ ರೌಡಿಗಳು ದಾಳಿ ನಡೆಸುವುದು ಇದು ಕೇವಲ ಪ್ರಶಾಂತ್ ಚವಾಣ್ ಮೇಲಿನ ದಾಳಿ ಅಲ್ಲ, ನಾಲ್ಕನೇ ಸ್ಥಂಭವೆಂದೇ ಕರೆಯಲಾದ ಪ್ರಜಾಪ್ರಭುತ್ವದ ಮೇಲೆ ಮಾಡಿದ ನೇರ ದಾಳಿ,” ಎಂದು ಅಭಿಪ್ರಾಯಪಟ್ಟರು.
“ಈ ದಾಳಿಯ ಹಿಂದೆ ಯಾರೋ ರಾಜಕೀಯ ಶಕ್ತಿ, ಯಾರೋ ಭ್ರಷ್ಟ ಅಧಿಕಾರಿ, ಯಾರೋ ರೌಡಿಯ ಬೆಂಬಲವಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ, ನಾಳೆ ಮತ್ತೊಬ್ಬ ಪತ್ರಕರ್ತನ ಮನೆಗೂ ಇದೇ ಅಪಾಯ. ಇದು ರಾಜ್ಯಕ್ಕೂ ದೇಶಕ್ಕೂ ಅಪಮಾನ,” ಎಂದು ಎಚ್ಚರಿಸಿದರು.
ಪತ್ರಕರ್ತರಿಗೆ ವಿಶೇಷ ರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದ ಅವರು, “ಗ್ರಾಮೀಣ ಪತ್ರಕರ್ತರಿಗೆ ಸರ್ಕಾರಿ ಭದ್ರತೆ, ಬಸ್‍ಪಾಸ್ ನೀಡುವುದರ ಕುರಿತು ಸರ್ಕಾರ ಹೇಳಿದ್ದರೂ ಇನ್ನೂ ಜಾರಿಗೆ ತಂದಿಲ್ಲ. ನಿಯಮ ಸಡಿಲಗೊಳಿಸಿ ತಕ್ಷಣ ಬಸ್‍ಪಾಸ್ ವಿತರಿಸಬೇಕು. ಪತ್ರಕರ್ತರ ಮೇಲೆ ದಾಳಿ ನಡೆಸುವವರು ಯಾರೇ ಇರಲಿ ರಾಜಕಾರಣಿಯೋ, ಅಧಿಕಾರಿಯೋ, ರೌಡಿಯೋ ಕಠಿಣ ಶಿಕ್ಷೆ ವಿಧಿಸಲೇಬೇಕು,” ಎಂದು ಆಗ್ರಹಿಸಿದರು.
ಈ ದಾಳಿ ಒಂದು ಏಕಾಂಗ ಘಟನೆ ಅಲ್ಲ ಎಂದು ಹೇಳಿದ ಅವರು, “ಇದು ದಿಟ್ಟ ಧ್ವನಿಯನ್ನು ಮೊಣಕಾಲೂರಿಸುವ ಪಿತೂರಿ. ಸರ್ಕಾರ ಇದನ್ನು ತಡೆದಿಲ್ಲವೆಂದರೆ ಕರ್ನಾಟಕದ ಪತ್ರಕರ್ತರು ರಾಜ್ಯದಾದ್ಯಂತ ಒಗ್ಗಟ್ಟಿನಿಂದ ರಾಜಧಾನಿಯತ್ತ್ತಿ ಹೋರಾಟಕ್ಕೆ ಸಾಗಲಿದ್ದಾರೆ,” ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ಪತ್ರಕರ್ತ ಶಾಂತಪ್ಪ ಕೋರೆ, ರಾಜಕುಮಾರ ಹಿರೇಮಠ, ತಯ್ಯಬ ಅಲಿ ಜರ್ದಿ, ಜಗದೀಶ ಕೋರೆ, ಪ್ರಭುಗೌಡ, ಹಣಮಂತ ಕುಲಕರ್ಣಿ, ಡಾ. ಅವಿನಾಶ್ ಎಸ್. ದೇವನೂರ, ತಾನಾಜಿ ಲವಟೆ, ಮಹೆಬೂಬ ತಂಬೋಳಿ, ಪ್ರೇಮ ರಾಠೋಡ್ ಸೇರಿದಂತೆ ಅನೇಕರು ಭಾಗವಹಿಸಿದರು.
ಸಿಎಂ ಹಾಗೂ ಗೃಹ ಸಚಿವರಿಗೆ ಉದ್ದೇಶಿಸಿದ ಮನವಿಯನ್ನು ತಹಸೀಲ್ದಾರ ಪರವಾಗಿ ಆಗಮಿಸಿದ್ದ ನಾಡ ತಹಸೀಲ್ದಾರ ಸಿದ್ರಾಮ ಹಡಪದ ಅವರಿಗೆ ಪತ್ರಕರ್ತರು ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರರು, “ಇದನ್ನು ತಕ್ಷಣ ಮುಖ್ಯಮಂತ್ರಿ ಕಚೇರಿಗೆ ಕಳುಹಿಸಲಾಗುತ್ತದೆ. ಪತ್ರಕರ್ತರ ಸುರಕ್ಷತೆ ಆಡಳಿತದ ಮೊದಲ ಆದ್ಯತೆ,” ಎಂದು ಭರವಸೆ ನೀಡಿದರು.