ಶಾಮನೂರು ನಿಧನಕ್ಕೆ ವಿಧಾಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ನಿನ್ನೆ ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ವಿಧಾನ ಪರಿಷತ್‌ನಲ್ಲಿ ಸಭಾಪತಿ ಹಾಗೂ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದರು.

ಬೆಳಗಾವಿ, ಡಿ. ೧೫- ವಿಧಾನಸಭೆಯ ಹಿರಿಯ ಸದಸ್ಯರಾದ ಶಾಮನೂರು ಶಿವಶಂಕರಪ್ಪರವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಸಂತಾಪ ವ್ಯಕ್ತಪಡಿಸಿ, ಶ್ರದ್ಧಾಂಜಲಿ ಸಲ್ಲಿಸಿ ಅವರ ಗೌರವಾರ್ಥ ಸದನವನ್ನು ನಾಳೆಗೆ ಮುಂದೂಡಲಾಯಿತು.


ಇಂದು ಸದನ ಆರಂಭವಾಗುತ್ತಿದ್ದಂತೆಯೇ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ರವರು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ವಿಧಾನಸಭೆಯ ಹಿರಿಯ ಸದಸ್ಯರಾದ ಶಾಮನೂರು ಶಿವಶಂಕರಪ್ಪನವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಶಾಮನೂರು ಶಿವಶಂಕರಪ್ಪನವರು ಜನಾನುರಾಗಿಯಾಗಿದ್ದರು. ಅವರ ತಾಳ್ಮೆ, ಆದರ್ಶ ನಮಗೆಲ್ಲಾ ಮಾದರಿ. ನಗುಮುಖದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದ ಶಾಮನೂರು ಶಿವಶಂಕರಪ್ಪನವರ ಜೀವನ ಒಂದು ಸಂದೇಶ, ಯುವ ಜನಪ್ರತಿನಿಧಿಗಳಿಗೆ ಮಾದರಿ ಎಂದು ಹೇಳಿದರು.


ಶಾಮನೂರು ಶಿವಶಂಕರಪ್ಪನವರು ಒಬ್ಬ ವ್ಯಕ್ತಿಯಾಗಿರದೆ ರಾಜಕಾರಣ, ಶಿಕ್ಷಣ, ಸಾಹಿತ್ಯ, ಆರೋಗ್ಯ, ಅಭಿವೃದ್ಧಿ, ಶಕ್ತಿ, ದಾನ ಧರ್ಮ ಸೇರಿದಂತೆ ಎಲ್ಲ ಅಪೂರ್ವ ಗುಣಗಳ ಸಂಗಮವಾಗಿದ್ದರು ಎಂದು ಬಣ್ಣಿಸಿದರು.


ದಾಣಗೆರೆಯ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಅವರು, ದಾವಣಗೆರೆಯಲ್ಲಿ ಜವಳಿ ಗಿರಣಿಗಳ ಅವನತಿ ಉಂಟಾದಾಗ ಆ ಊರಿಗೆ ಬ್ರ್ಯಾಂಡ್ ಇಮೇಜ್ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಪಾರ ದೈವ ಭಕ್ತರಾಗಿದ್ದ ಶಾಮನೂರು ಶಿವಶಂಕರಪ್ಪನವರು ನಾಡಿನ ಬಹುತೇಕ ದೇವಸ್ಥಾನಗಳ ಗೋಪುರ, ರಥಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು. ಯಾರೊಂದಿಗೂ ವೈರತ್ವ ಸಾಧಿಸದೆ ಎಲ್ಲರೊಂದಿಗೆ ಸ್ನೇಹದಿಂದ ಇದ್ದ ಅಜಾತ ಶತ್ರು. ಅವರ ಸಾಮಾಜಿಕ ಕಳಕಳಿ ನಮಗೆಲ್ಲಾ ಮಾದರಿ ಎಂದು ಹೇಳಿದರು.


ಸಭಾಧ್ಯಕ್ಷರ ಸಂತಾಪ ಸೂಚನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಮನೂರು ಶಿವಶಂಕರಪ್ಪನವರ ಆತ್ಮಕ್ಕೆ ಶಾಂತಿ ಕೋರಿ, ಅವರ ಸುದೀರ್ಘ ರಾಜಕೀಯ ಬದುಕನ್ನು ಮೆಲುಕು ಹಾಕಿ, ದಾವಣಗೆರೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಶಿವಶಂಕರಪ್ಪನವರು ಕಾರಣ. ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ್ದರು ಎಂದರು.


ಸುದೀರ್ಘ ಕಾಲ ರಾಜ್ಯ ಕಾಂಗ್ರೆಸ್‌ನ ಖಜಾಂಚಿಯಾಗಿ ಎಲ್ಲರ ಜತೆ ಸ್ನೇಹ ಹೊಂದಿದ್ದ ಶಾಮನೂರು ಶಿವಶಂಕರಪ್ಪನವರು ಅಜಾತ ಶತ್ರು. ನಾನು ದಾವಣಗೆರೆಗೆ ಹೋದಾಗಲೆಲ್ಲಾ ಅವರ ಅತಿಥಿಗೃಹದಲ್ಲೆ ಉಳಿದುಕೊಳ್ಳುತ್ತಿದ್ದೆ. ಅವರ ಮನೆಯಲ್ಲೇ ಊಟ ಮಾಡುತ್ತಿದ್ದೆ. ಅವರ ಜಾಗದಲ್ಲೇ ನನ್ನ ೭೫ನೇ ದಿನದ ಜನ್ಮದಿನದ ಸಮಾರಂಭ ನಡೆದಿತ್ತು ಎಂಬುದನ್ನು ನೆನಪಿಸಿಕೊಂಡರು.


ಸಹಾಯಾಸ್ತ ಗುಣ ಹೊಂದಿದ್ದ ಶಾಮನೂರು ಶಿವಶಂಕರಪ್ಪನವರು ಕೋವಿಡ್ ಸಂದರ್ಭದಲ್ಲಿ ೬ ಕೋಟಿ ವೆಚ್ಚದಲ್ಲಿ ಉಚಿತವಾಗಿ ಆಮ್ಲಜನಕ ಘಟಕಗಳನ್ನು ಒದಗಿಸಿದ್ದರು. ಅವರೊಬ್ಬ ಅಪರೂಪದ ರಾಜಕಾರಣಿ. ಅವರನ್ನು ಕಳೆದುಕೊಂಡಿರುವುದು ನಮಗೆಲ್ಲಾ ಆದ ದೊಡ್ಡ ನಷ್ಟ ಎಂದರು.


ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಇಳಿ ವಯಸ್ಸಿನಲ್ಲೂ ಶಾಮನೂರು ಶಿವಶಂಕರಪ್ಪನವರು ಮತ್ತೊಂದು ಚುನಾವಣೆಗೆ ನಿಲ್ಲುವ ಗಟ್ಟಿತನ ಹೊಂದಿದ್ದರು. ಕ್ಷೇತ್ರದ, ಸಮಾಜದ ಒಳಿತಿಗಾಗಿ ನಿಷ್ಠೂರವಾಗಿ, ಧೈರ್ಯವಾಗಿ ಮಾತನಾಡುವ ಗುಣ ಹೊಂದಿದ್ದರು. ಬಹುಶಃ ದೇಶದಲ್ಲೇ ಹಿರಿಯ ಶಾಸಕರು ಅವರಾಗಿದ್ದರು. ಅವರ ನಿಧನದಿಂದ ನಾಡು ಒಬ್ಬ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಿದೆ ಎಂದರು.


ಸಚಿವರಾದ ಮುನಿಯಪ್ಪ, ಸದಸ್ಯರುಗಳಾದ ಸುರೇಶ್‌ಕುಮಾರ್, ಹೆಚ್.ಸಿ. ಬಾಲಕೃಷ್ಣ, ಯು.ಬಿ. ಬಣಕಾರ್, ಸಿ.ಸಿ. ಪಾಟೀಲ್, ಶಿವಲಿಂಗೇಗೌಡ, ಅಪ್ಪಾಜಿ ನಾಡಗೌಡ, ಹೆಚ್.ಡಿ. ರಂಗನಾಥ್, ಸಿದ್ದುಸವದಿ, ಡಾ. ಶ್ರೀನಿವಾಸ್, ಜಿ.ಟಿ. ಪಾಟೀಲ್, ಸಿಮೆಂಟ್ ಮಂಜು, ಅರಗ ಜ್ಞಾನೇಂದ್ರ, ಸಚಿವರಾದ ಜಮೀರ್ ಅಹಮದ್ ಖಾನ್ ಇವರುಗಳೆಲ್ಲಾ ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿ ಶಾಮನೂರು ಶಿವಶಂಕರಪ್ಪನವರ ನಡೆ, ಅಭಿವೃದ್ಧಿ ರಾಜಕಾರಣ ಎಲ್ಲವನ್ನು ಮೆಲುಕು ಹಾಕಿ, ಅವರ ನಿಧನ ರಾಜ್ಯಕ್ಕೆ ಆದ ದೊಡ್ಡ ನಷ್ಟ. ಅವರೊಬ್ಬರ ಸಮಾಜಮುಖಿ ರಾಜಕಾರಣಿಯಾಗಿದ್ದರು ಎಂದರು.


ಇದಾದ ಬಳಿಕ ಸದನದಲ್ಲಿ ಒಂದು ನಿಮಿಷ ಮೌನ ಆಚರಿಸಿ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರ ಗೌರವಾರ್ಥ ಸದನವನ್ನು ನಾಳೆಗೆ ಮುಂದೂಡಲಾಯಿತು.