ಜಿಲ್ಲಾ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಘಟಕ ಅತ್ಯವಶ್ಯಕ :ದಿನೇಶ್

ಕೋಲಾರ,ಜ,೨೧- ತಾಲ್ಲೂಕಿನ ನರಸಾಪುರದ ಹೆದ್ದಾರಿಯಲ್ಲಿ ೧೨.೫ ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹಾಗೂ ನಗರದಲ್ಲಿ ೫೦ ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕ ಕೇಂದ್ರವನ್ನು ೧೬ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವುದನ್ನು ಉದ್ಘಾಟಿಸಲಾಗಿದೆ. ತುರ್ತು ಚಿಕಿತ್ಸಾ ಘಟಕವು ಜಿಲ್ಲಾ ಕೇಂದ್ರಕ್ಕೆ ಅತ್ಯವಶ್ಯಕವಾಗಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಅಲ್ಲದೆ ಗಡಿಭಾಗದಲ್ಲಿನ ಹೊರ ರಾಜ್ಯದ ಜನತೆಗೊ ಇಂಥಹ ಆಸ್ಪತ್ರೆ ಅನಿವಾರ್ಯವಾಗಿತ್ತು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಎಸ್.ಎನ್.ಆರ್. ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕ (ಸಿ.ಸಿ.ಟಿ) ಡಯಾಲಿಸಿಸ್ ನೂತನ ಕಟ್ಟಡ ಹಾಗೂ ಇತರೆ ಆರೋಗ್ಯ ಸೇವೆಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ೨೦ ಹಾಸಿಗೆಯ ಡಯಾಲೀಸಿಸ್ಸ್ ಘಟಕದ ಕಾಮಗಾರಿಯನ್ನು ಜಿಲ್ಲೆಯ ಎಲ್ಲಾ ಪ್ರತಿನಿಧಿಗಳ ಅನುದಾನದಿಂದ ನಿರ್ಮಿಸುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ. ದಿನೇ ದಿನೇ ಡಯಾಲೀಸಿಸ್ಸ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜಿಲ್ಲಾ ಆಸ್ಪತ್ರೆಗೆ ಅನಿವಾರ್ಯವಾಗಿತ್ತು ಎಂದರು.


ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಆಡಳಿತಕ್ಕೆ ಬಂದ ನಂತರದಲ್‌ಲಿ ರಾಜ್ಯದಲ್ಲಿ ಸುಮಾರು ೨೦೦ ಡಯಾಲೀಸಿಸ್ಸ್ ಕೇಂದ್ರಗಳಿಗೆ ಮಂಜೂರಾತಿ ನೀಡಿ ಗುಣಮಟ್ಟದ ಚಿಕಿತ್ಸೆಗಳ ಜೂತೆಗೆ ಔಷಧಗಳನ್ನು ನೀಡಲಾಗುತ್ತಿದೆ. ಮುಳಬಾಗಿಲು ತಾಲ್ಲೂಕಿನ ನಂಗಲಿಯಲ್ಲಿ ೧೨.೫ ಕೋಟಿ ರೂ ವೆಚ್ಚದಲ್ಲಿ ಮುಳಬಾಗಿಲಿನಲ್ಲಿ ಎಂ.ಸಿ.ಎ. ೨೦ ಕೋಟಿ ರೂ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ , ಮಾಲೂರಿನಲ್ಲಿ ೪೦ ಕೋಟಿ ರೂ ವೆಚ್ಚದಲ್ಲಿ ೧೦೦ ಹಾಸಿಕೆಗಳ ತಾಲ್ಲೂಕು ಆಸ್ಪತ್ರೆಗೆ ಅನುಮತಿಸಲಾಗಿದೆ ಎಂದರು.


ಕೋಲಾರದ ರಹಮತ್ ನಗರದಲ್ಲಿ ಹಾಗೂ ನೂಕಲಬಂಡೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಇದೇ ರೀತಿ ವಿವಿಧಡೆ ಪ್ರತಿ ಆರೋಗ್ಯ ಕೇಂದ್ರಕ್ಕೆ ೬೦ ಲಕ್ಷ ರೂಗಳಂತೆ ೪ ಪಿ.ಹೆಚ್.ಸಿ. ಗಳನ್ನು ಮಂಜೂರು ಮಾಡಿದೆ. ಎಂದ ಅವರು ಸಾರ್ವಜನಿಕರಿಗೆ ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಇತರೆ ಅಗತ್ಯತೆ ಇರುವ ಇಲಾಖೆಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಕೆ.ಜಿ.ಎಫ್ ನಲ್ಲಿ ೧೦ ಕೋಟಿ ರೂ ವೆಚ್ಚದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಕೆ ಮಾಡಲು ಮುಖ್ಯ ಮಂತ್ರಿಗಳ ಹಾಗೂ ನನ್ನ ಅನುದಾನವನ್ನು ಸಹ ನೀಡಲಾಗಿದೆ. ಕೋಲಾರ ತಾಲ್ಲೂಕಿನ ಕ್ಯಾಲನೂರಿನಲ್ಲಿ ೪ ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಆಸ್ಪತ್ರೆಯ ಕಾಮಗಾರಿಯು ಪ್ರಗತಿಯಲ್ಲಿದೆ ಎಂದ ಅವರು ಕೋಲಾರಕ್ಕೆ ರಾಜ್ಯದಲ್ಲಿಯೇ ಸಾವಿರಾರು ಕೋಟಿ ರೂ ಗಳ ಅನುದಾನವನ್ನು ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರು ತಂದಿದ್ದಾರೆಂದು ಶ್ಲಾಘಿಸಿದರು.


ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯನವರ ಸರ್ಕಾರ ಅಭಿವೃದ್ದಿಯಲ್ಲಿ ಹಿನ್ನಡೆಯಾಗಿದೆ ರಾಜ್ಯ ಬೊಕ್ಕಸ ಖಾಲಿ ಖಾಲಿ ಎಂದು ಟೀಕಿಸುವಂತ ವಿಪಕ್ಷದವರಿಗೆ ಉತ್ತರಿಸುವಂತಾಗ ಬೇಕು. ಪ್ರತಿ ಆಸ್ಪತ್ರೆಗೆ ಕಿಮೋ ಥೇರಪಿಯ ಸೌಲಭ್ಯವನ್ನು ಕಲ್ಪಿಸಲಾಗಿದೆ ರಾಜ್ಯದಲ್ಲಿ ೯ ಸೊಪರ್ ಸ್ಪೇಷಲ್ ಆಸ್ಪತ್ರೆಗಳಿಗೆ ಅಗತ್ಯವಾದ ವೈದ್ಯರ ತಜ್ಞರ ನೇಮಕಾತಿಗಳಿಗೆ ಅನುಮತಿಸಲಾಗಿದೆ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸೌಲಭ್ಯಗಳಿಗಿಂತ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ. ಪ್ರತಿ ತಾಲ್ಲೂಕಿನಲ್ಲಿ ೨೪*೭ ಚಿಕಿತ್ಸೆಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ಈಗಾಗಲೇ ನೇಮಕಾತಿ ಪ್ರಗತಿಯಲ್ಲಿದೆ. ಗರ್ಭೀಣಿಯರ ಹೆರಿಗೆ ತಜ್ಞರು ಪ್ರತಿ ಆಸ್ಪತ್ರೆಯಲ್ಲೂ ಇರುವಂತೆ ಕ್ರಮ ಜರುಗಿಸಲಾಗುತ್ತಿದೆ. ಚಿಕಿತ್ಸೆಯ ಜೂತೆಗೆ ಉಚಿತ ಔಷಧ ಸೌಲಭ್ಯಗಳನ್ನು ಕಲ್ಪಸಿಲು ಸೂಚಿಸಲಾಗಿದೆ. ಎಂದರು.


ರಾಜ್ಯದ ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಎಂ.ಆರ್.ಐ ಹಾಗೂ ಸಿ.ಟಿ. ಸ್ಕಾನ್ ಸೌಲಭ್ಯಗಳು ಉಚಿತವಾಗಿ ಸಿಗುವಂತೆ ಸೂಚಿಸಿದೆ. ಸೂಪರ್ ಹಾಗೂ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಂಡಿದೆ,.ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ೧೦ ಕೋಟಿ ರೂಗಳನ್ನು ದುರಸ್ಥಿಗಳಿಗೆ ನೀಡಿರುವುದನ್ನು ಸದ್ಬಳಿಸಿ ಕೊಳ್ಳ ಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.


ಕೋಲಾರ ಜಿಲ್ಲೆಯಲ್ಲಿ ಸುಮಾರು ೨೭.೫ ಲಕ್ಷ ಜನತೆಗೆ ೫.೨೫ ಮನೆಗಳಿಗೆ ಗೃಹ ಆರೋಗ್ಯ ಚಿಕಿತ್ಸೆಗೆ ಗುರುತಿಸಲಾಗಿದೆ. ಸುಮಾರು ೧೦೫೦೦ ಡಯಾಬಿಟಿಸ್. ೧೨ ೫೦೦ ಮಂದಿ ರಕ್ತದ ಒತ್ತಡ, ೩೫೦ ಸ್ತನ ಕ್ಯಾನ್ಸರ್, ೧೫೦ ಮಂದಿಗೆ ಗರ್ಭ ಕೋಶ ಕ್ಯಾನ್ಸರ್ ಇರುವ ರೋಗಿಗಳನ್ನು ಗುರುತಿಸಲಾಗಿದೆ ಒಟ್ಟಾರೆಯಾಗಿ ೧೪ ಪ್ರಮುಖ ಕಾಯಿಲೆಗಳ ತಪಾಸಣೆಗಳನ್ನು ಮಾಡುವ ಮೂಲಕ ರೋಗವು ಬರುವ ಮೊದಲೇ ಗುರುತಿಸಿ ಪೂರ್ವ ಭಾವಿಯಾಗಿ ಚಿಕಿತ್ಸೆ ನೀಡಲಾಗುವುದು. ಕಿಡ್ನಿ ಮತ್ತು ಲೀವರ ಸೇರಿದಂತೆ ಎಲ್ಲಾ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಿಗಳ ಸೌಲಭ್ಯವನ್ನು ಕಲ್ಪಿಸ ಬೇಕೆಂಬುವುದು ನಮ್ಮ ಸರ್ಕಾರದ ಮಹಾತ್ಮಕಾಂಕ್ಷಿಯಾಗಿದೆ ಎಂದರು


ನಾನು ಆರೋಗ್ಯ ಸಚಿವನಾದ ಮೇಲೆ ಕೋಲಾರಕ್ಕೆ ೭ ಬಾರಿ ಬಂದಿರುವೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಭೇಟಿ ನೀಡಿರುವುದು ಕೋಲಾರ ಜಿಲ್ಲೆಗೆ ಇದಕ್ಕೆ ಕಾರಣ ಸಚಿವರಾದ ಬೈರತಿ ಸುರೇಶ್, ಎಂ.ಎಲ್.ಸಿ. ಅನಿಲ್ ಕುಮಾರ್ ಹಾಗೂ ಶಾಸಕರಾದ ಡಾ.ಕೊತ್ತೂರು ಜಿ. ಮಂಜುನಾಥ್ ಅವರ ಮೇಲಿನ ಪ್ರೀತಿ, ವಿಶ್ವಾಸದ ಮೇಲೆ ಬಂದಿರುವೆ ಎಂದರು.
ಕಾರ್ಯಕ್ರಮದಲ್ಲಿ ನಗರ ಯೋಜನಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್, ಶಾಸಕರಾದ ಡಾ.ಕೊತ್ತೂರು.ಜಿ.ಮಂಜುನಾಥ್ ಮಾತನಾಡಿದರು.


ವೇದಿಕೆಯಲ್ಲಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಆಹಮದ್, ಲೋಕಾಸಭಾ ಸದಸ್ಯ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್. ಇಂಚರ ಗೋವಿಂದರಾಜು, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ.ಕೆ.ವಸಂತ ಕುಮಾರ್, ಆರೋಗ್ಯ ಇಲಾಕೆಯ ಕಾರ್ಯಪಾಲಕ ಇಂಜನಿಯರ್ ಎ.ಬಿ.ನಾಗರಾಜ್, ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ. ಜಿ.ಪಂ. ಸಿ.ಇ.ಓ. ಡಾ. ಪ್ರವೀಣ್ ಪಿ.ಬಾಗೇವಾಡಿ, ಡಿ.ಹೆಚ್.ಓ. ಡಾ. ಜಿ. ಶ್ರೀನಿವಾಸ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ಎಂ. ಹಾಗೂ ಮುಖಂಡರಾದ ಕೆ.ವಿ. ಗೌತಮ್, ಸೀಸಂದ್ರ ಗೋಪಾಲ್. ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮಣಿಘಟ್ಟ ಸೊಣ್ಣೆಗೌಡ, ನಿಕಟಪೂರ್ವ ಡಿ.ಹೆಚ್.ಓ. ಡಾ. ವಿಜಯ್ ಕುಮಾರ್ ಉಪಸ್ಥಿತರಿದ್ದರು.