ಕೋಲಾರ,ಆ.೧೭- ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೋಲಾರ ಉಪಕೇಂದ್ರದಲ್ಲಿ ಸಂಭ್ರಮದ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಕರ್ನಾಟಕ ಸೇನೆಯ ನೇತೃತ್ವದಲ್ಲಿ ಆಚರಿಸಲಾಯಿತು.
ಜಿಟಿಟಿಸಿಯ ಸ್ಟಾರ್ಟ್ ಅಪ್ ವಿಭಾಗದ ಉಪಪ್ರದಾನ ವ್ಯವಸ್ಥಾಪಕರಾದ ಟಿ.ಜಿ ಶ್ರೀಧರ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿಗಳ ಆದರ್ಶಗಳನ್ನು ರೂಢಿಸಿಕೊಳ್ಳಲು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಷ್ಟ್ರವನ್ನು ಸದೃಢವಾಗಿ ಕಟ್ಟಲೂ ಸ್ವಾತಂತ್ರ್ಯ ಸೇನಾನಿಗಳಂತೆ ನೀವು ಸಿದ್ಧರಾಗಬೇಕು ಎಂದರು.
ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷರಾದ ಅವಿನಾಶ್ ನಾರಾಯಣ ಮತ್ತು ಸೇನೆಯ ಮಹಿಳಾ ಜಿಲ್ಲಾ ಅಧ್ಯಕ್ಷೆ ಪಿ. ಕುಮಾರಿ ಅವರು ಅತಿಥಿಗಳಾಗಿ ಭಾಗವಹಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರನ್ನು ನೆನೆಯುವುದು ಇಂದಿನ ಯುವ ಪೀಳಿಗೆಗೆ ಅವಶ್ಯಕ, ಹಾಗೆಯೇ ಕನ್ನಡ ನಾಡಿನ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂತಾದ ಹೋರಾಟಗಾರರ ತ್ಯಾಗ ಬಲಿದಾನದ ಕುರಿತು ಮಾತನಾಡಿದರು.
ಜಿಟಿಟಿಸಿ ಕೋಲಾರ ಕೇಂದ್ರದ ಉಪನ್ಯಾಸಕ ಪ್ರವೀಣ ಮಾತನಾಡುತ್ತಾ, ಯುರೋಪಿಯನ್ನರು ವ್ಯಾಪಾರಕ್ಕಾಗಿ ಬಂದು ಸ್ವಾತಂತ್ರ್ಯ ಪೂರ್ವ ಭಾರತವನ್ನು ’ಹೊಡೆದು ಆಳುವ ನೀತಿ’ಯ ಮೂಲಕ ಆಳ್ವಿಕೆ ನಡೆಸಿದರು. ಅವರ ವಿರುದ್ಧ ೧೮೫೭ನೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭವಾದ ಚಳುವಳಿಯು ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿಯರೆಗಿನ ಇತಿಹಾಸ ಘಟನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಹಾಗೆಯೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಾ ತಮ್ಮ ಪ್ರಾಣವನ್ನು ಬಲಿಧಾನ ಮಾಡಿದ ಭಗತ್ ಸಿಂಗ್, ಮಂಗಲ್ ಪಾಂಡೆ, ಝಾನ್ಸಿ ರಾಣಿ ಲಕ್ಷ್ಮಿ ಭಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿತು ತಿಳಿಸಿದರು.
ಜಿಟಿಟಿಸಿ ಕೋಲಾರ ಕೇಂದ್ರದ ಪ್ರಾಂಶುಪಾಲ ವಿಕಾಸ್ ಡಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಹೇಳಿದರು. ಹಾಗೆಯೇ ಪ್ರಸ್ತುತ ದೇಶವನ್ನು ಕಾಯುತ್ತಿರುವ ಸೈನಿಕರನ್ನು ಕುರಿತ ತ್ಯಾಗವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ, ರೈತ ಘಟಕದ ವೆಂಕಟರಾಮಪ್ಪ, ಪದಾಧಿಕಾರಿಗಳಾದ ಸುಮನ್ ರಾಜ್, ಪ್ರಭಾಕರ್, ರಮೇಶ್, ಅನಿಲ್, ವಿಜಯ್ ಕುಮಾರ್, ಬಾಲಕೃಷ್ಣ, ಶಿವು, ಸುರೇಶ್, ಶಿವಣ್ಣ, ಮಂಜುನಾಥ್, ಚಂದ್ರ ಆಚಾರಿ ಮತ್ತು ಜೆ ಸಿ ಪಿ ನವೀನ್ ಸೇರಿದಂತೆ ಉಪನ್ಯಾಸಕರು, ಬೋಧಕೇತರ ಸಿಬ್ಬಂಧಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
























