Home ಜಿಲ್ಲೆ ಪ್ರಗತಿಗೆ ವಿದ್ಯುತ್ ಅನಿವಾರ್ಯ:ಬೀದರ್ ಜಿಲ್ಲೆಯಲ್ಲಿ 1,100 ಕೋಟಿ ರೂ. ವೆಚ್ಚದ ವಿದ್ಯುತ್ ಯೋಜನೆಗಳಿಗೆ ಹಂತ ಹಂತವಾಗಿ...

ಪ್ರಗತಿಗೆ ವಿದ್ಯುತ್ ಅನಿವಾರ್ಯ:ಬೀದರ್ ಜಿಲ್ಲೆಯಲ್ಲಿ 1,100 ಕೋಟಿ ರೂ. ವೆಚ್ಚದ ವಿದ್ಯುತ್ ಯೋಜನೆಗಳಿಗೆ ಹಂತ ಹಂತವಾಗಿ ಚಾಲನೆ:ಸಚಿವ ಈಶ್ವರ ಬಿ.ಖಂಡ್ರೆ

ಬೀದರ, ಮೇ.17: ಪ್ರಗತಿಗೆ ವಿದ್ಯುತ್ ಅನಿವಾರ್ಯವಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಇಂಧನ ಸ್ವಾವಲಂಬನೆಗೆ ಪೂರಕವಾಗಿ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಾದರಿಯಲ್ಲಿ ಸುಮಾರು 1,100 ಕೋಟಿ ರೂಪಾಯಿಗಳ ಬೃಹತ್ ವಿದ್ಯುತ್ ಕಾರಿಡಾರ್ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಶನಿವಾರ ಬೀದರ ತಾಲ್ಲೂಕಿನ ಗೋರನಳ್ಳಿ.ಬಿ (ಚಿಟ್ಟಾ) ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಆಯೋಜಿಸಿದ 110/11 ಕೆ.ವಿ. ಗೋರನಳ್ಳಿ.ಬಿ (ಚಿಟ್ಟಾ) ವಿದ್ಯುತ್ ಉಪ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಬೃಹತ್ ಯೋಜನೆಯಡಿ 700 ಕೋಟಿ ರೂ. ವೆಚ್ಚದ 440 ಕೆವಿ ಕೇಂದ್ರ, 150 ಕೋಟಿ ರೂ. ವೆಚ್ಚದ 220 ಕೆವಿ ಕೇಂದ್ರ ಹಾಗೂ 22 ಕೋಟಿ ರೂ. ವೆಚ್ಚದಲ್ಲಿ ಒಟ್ಟು 16 ಹೊಸ ವಿದ್ಯುತ್ ವಿತರಣಾ ಉಪಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು. ಮುಂದಿನ ಒಂದು ವರ್ಷದೊಳಗೆ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಇನ್ನುಮುಂದೆ ಜಿಲ್ಲೆಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಹಾಗೂ ಟ್ರಿಪಿಂಗ್ ಸಮಸ್ಯೆ ತಗ್ಗಲಿದೆ ಎಂದರು.
ವಿಶೇಷವಾಗಿ ಕೃಷಿ ಪ್ರಧಾನವಾದ ಬೀದರ್ ಜಿಲ್ಲೆಯ ರೈತರು ಎದುರಿಸುತ್ತಿರುವ ವಿದ್ಯುತ್ ವ್ಯತ್ಯಯ ಹಾಗೂ ಟ್ರಾನ್ಸ್ಫಾರ್ಮರ್‍ಗಳು ಸುಟ್ಟುಹೋಗುವ ಸಮಸ್ಯೆಗಳಿಗೆ ಈ ಯೋಜನೆಗಳ ಮೂಲಕ ಶಾಶ್ವತ ಪರಿಹಾರ ಸಿಗಲಿದೆ. ಗುಣಮಟ್ಟದ ವಿದ್ಯುತ್ ವಿತರಣೆಯಿಂದ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗಲಿದ್ದು, ಇಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ಇಂಧನವನ್ನು ಕಲಬುರಗಿ, ಹೈದರಾಬಾದ್ ಹಾಗೂ ಗೋವಾ ಸೇರಿದಂತೆ ನೆರೆಯ ಪ್ರಾಂತ್ಯಗಳಿಗೂ ಸರಬರಾಜು ಮಾಡಲು ಈ ನೂತನ ಕಾರಿಡಾರ್ ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಇಂಧನ ಸ್ವಾವಲಂಬನೆಯ ಮಹತ್ವವನ್ನು ಒತ್ತಿಹೇಳಿದ ಸಚಿವರು, ದೇಶದ ಆರ್ಥಿಕತೆಯ ಮೇಲಾಗುತ್ತಿರುವ ವಿದೇಶಿ ತೈಲ ಆಮದಿನ ಹೊರೆಯನ್ನು ತಪ್ಪಿಸಲು ರೈತರು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಮುಂದಾಗಬೇಕು. ರೈತರು ತಮ್ಮ 3-4 ಎಕರೆ ಜಮೀನಿನಲ್ಲಿ ಸುಮಾರು 1 ಮೆಗಾವ್ಯಾಟ್ ಸಾಮಥ್ರ್ಯದ ಸೌರ (ಸೋಲಾರ್) ಅಥವಾ ಪವನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ, ತಮ್ಮ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಪಡೆಯುವುದರ ಜೊತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರಕ್ಕೆ ಮಾರಿ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದು ಅವರು ಸಲಹೆ ನೀಡಿದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿ, ಬೀದರ ಜಿಲ್ಲೆಯ ತೀವ್ರ ತಾಂತ್ರಿಕ ಸಮಸ್ಯೆಗಳು ಮತ್ತು ವಿದ್ಯುತ್ ಏರಿಳಿತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಕೆಪಿಟಿಸಿಎಲ್ ವತಿಯಿಂದ ಗೋರನಳ್ಳಿ ಗ್ರಾಮದಲ್ಲಿ ನೂತನ ವಿದ್ಯುತ್ ಉಪಕೇಂದ್ರದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕಾಪೆರ್Çರೇಷನ್ ವ್ಯಾಪ್ತಿಗೆ ಒಳಪಟ್ಟಿರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಶಾಹಪುರ, ಮಲಕಾಪುರ, ಸುಲ್ತಾನ್‍ಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರ ನಿರಂತರ ವಿದ್ಯುತ್ ಬೇಡಿಕೆಯನ್ನು ಈ ಕೇಂದ್ರವು ಈಡೇರಿಸಲಿದೆ. ಸುದೀರ್ಘ ಪ್ರಯತ್ನ ಹಾಗೂ 34 ಎಕರೆ ಜಾಗದ ಕಾನೂನು ತೊಡಕುಗಳನ್ನು ನಿವಾರಿಸಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಗುತ್ತಿಗೆದಾರರು ಹಾಗೂ ಇಲಾಖೆಯ ಎಂಜಿನಿಯರ್‍ಗಳು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಲೋಕಾರ್ಪಣೆಗೆ ಮುಕ್ತಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯುಚ್ಛಕ್ತಿ, ಪ್ರಸರಣ ವಲಯ, ಕೆ.ವಿ.ಪ್ರ.ನಿ.ನಿ., ಕಲಬುರಗಿಯ ಮುಖ್ಯ ಅಭಿಯಂತರ ರಾಮಸ್ವಾಮಿ ಎಮ್.ಎಲ್., ಯೋಜನೆಗಳ ವೃತ್ತ, ಕೆ.ವಿ.ಪ್ರ.ನಿ.ನಿ., ಕಲಬುರಗಿಯ ಅಧೀಕ್ಷಕ ಅಭಿಯಂತರರಾಮಚಂದ್ರ ಎಸ್.ಜಿ., ಜೆಸ್ಕಾಂ ಕಲಬುರಗಿಯ ಮುಖ್ಯ ಅಭಿಯಂತರ ವೆಂಕಟೇಶ್ ಹಳವಿ, ಕೆ.ಪಿ.ಟಿ. ಸಿ.ಎಲ್ ಕಾರ್ಯನಿರ್ವಾಹಕ ಅಭಿಯಂತರ ಶಶಿರೇಖಾ ಪಾಟೀಲ್, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಮೇಶ್ ಪಾಟೀಲ್ ಯೋಜನೆಗಳ ವಿಭಾಗ, ಕೆ.ವಿ.ಪ್ರ.ನಿ.ನಿ., ಬೀದರನ ಅಧೀಕ್ಷಕ ಅಭಿಯಂತರರು ರೇಣುಕಾ ಟಿ.ಜೆ., ಯೋಜನೆಗಳ ವಿಭಾಗ, ಕೆ.ವಿ.ಪ್ರ.ನಿ.ನಿ., ಬೀದರನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಪ್ರಭು ರೆಡ್ಡಿ, ಯೋಜನೆಗಳ ವಿಭಾಗ (ಸಿವಿಲ್) ಕೆ.ವಿ.ಪ್ರ.ನಿ.ನಿ., ಕಲಬುರಗಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ, ಜೆಸ್ಕಾಂ ಬೀದರನ ಅಧಿಕ್ಷಕ ಅಭಿಯಂತರ ವೀರಭದ್ರಪ್ಪ ಸಾಲಿಮನಿ ಸೇರಿದಂತೆ ಕೆಪಿಟಿಸಿಎಲ್ ಹಾಗೂ ಜೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.