
ಕರಜಗಿ,ಸೆ 22: ಸೋಮವಾರದ ಮಳೆಯಿಂದಾಗಿ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ವಾರ್ಡ್ ನಂ. 3/4ರಲ್ಲಿ ಚೌಡವ್ವ ಮಲಕಪ್ಪ ಅವರ ಮನೆಗೆ ಮಳೆ ನೀರು ನುಗ್ಗಿ, ವೃದ್ಧ ದಂಪತಿ ಇಡೀ ರಾತ್ರಿ ಮನೆಯಲ್ಲೇ ಕುಳಿತು ನೆನೆಯುವಂತಹ ದುಸ್ಥಿತಿ ಎದುರಾಗಿದೆ.
ಮಳೆ ನೀರು ಮನೆಯೊಳಗೆ ನುಗ್ಗಿದ್ದರಿಂದ ಕಣ್ಣೀರಿಟ್ಟ ಚೌಡವ್ವ ಮಲಕಪ್ಪ, ನನ್ನ ಕಿವಿ ಸರಿಯಾಗಿ ಕೇಳುವುದಿಲ್ಲ, ಸ್ವಲ್ಪ ಮಟ್ಟಿಗೆ ಮಾತ್ರ ಕಣ್ಣು ಕಾಣುತ್ತದೆ. ನನ್ನ ಗಂಡ ಹಾಗೂ ನಾನು ಇಡೀ ರಾತ್ರಿ ಮಳೆಯಲ್ಲಿ ನೆನೆಯುವ ಪರಿಸ್ಥಿತಿ ಬಂದಿದೆ. ನಮಗೆ ಹಿಂದೆ ಮುಂದೆ ಯಾರೂ ಇಲ್ಲ. ದಯವಿಟ್ಟು ನಮ್ಮ ಮನೆ ಮುಂದೆ ನೀರು ಬರದಂತೆ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ವಾರ್ಡ್ನ ನೀರೆಲ್ಲ ನಮ್ಮ ಮನೆ ಮುಂದೆ ಬರುತ್ತಿದೆ.ಮಳೆ ಬಂದಾಗಲೆಲ್ಲ ಮನೆಯೊಳಗೆ ನೀರು ನುಗ್ಗುತ್ತದೆ. ಈ ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.ಆದರೆ ನಮ್ಮ ಸಮಸ್ಯೆಯನ್ನು ಕೇಳಲು ಯಾರೂ ಬರುತ್ತಿಲ್ಲ.ಕೇಳಲು ಹೋದರೂ ನಮ್ಮ ಮಾತಿಗೆ ಸ್ಪಂದಿಸುವವರು ಇಲ್ಲ ಎಂದು ಚೌಡವ್ವ ಮಲಕಪ್ಪ ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾರೆ.ಈ ಸಮಸ್ಯೆ ಇಂದು ನಿನ್ನೆಯದಲ್ಲ. ಮಳೆ ನೀರು ಮನೆಯೊಳಗೆ ನುಗ್ಗುತ್ತಿರುವ ಕುರಿತು ಹಲವು ಬಾರಿ ಮನವಿ ಮಾಡಿದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅವರು ಹೇಳಿದ್ದಾರೆ.
ವಯಸ್ಸಾಗಿದೆ, ಈ ಕಷ್ಟವನ್ನು ಇನ್ನೆಷ್ಟು ದಿನ ಸಹಿಸಬೇಕು? ಕನಿಷ್ಠ ಮನೆ ಮುಂದೆ ಮುರುಮ್ ಹಾಕಿಸಿ, ಮಳೆ ನೀರು ಮನೆಯೊಳಗೆ ನುಗ್ಗದಂತೆ ಮಾಡಿ ಎಂದು ಕಣ್ಣೀರಿಡುತ್ತಾ ಶಾಸಕರಿಗೆ ಮನವಿ ಮಾಡಿದ್ದಾರೆ.
ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ತಕ್ಷಣ ಮುರುಮ್ ಹಾಕಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ಅಥವಾ ನೀರು ಹರಿಯುವ ವ್ಯವಸ್ಥೆ ಕಲ್ಪಿಸಬೇಕು ಎಂದು ಚೌಡವ್ವ ಮಲಕಪ್ಪ ಅವರು ಒತ್ತಾಯಿಸಿದ್ದಾರೆ.
ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ವೃದ್ಧ ದಂಪತಿಯ ಪರಿಸ್ಥಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತುರ್ತು ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.























