ಪ್ರತಿ ಗ್ರಾಮದಲ್ಲಿ ಏಕಲ್ ವಿದ್ಯಾಲಯ

ಬೀದರ:ಡಿ.೩೦: ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಏಕಲ್ ವಿದ್ಯಾಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಏಕಲ್ ಅಭಿಯಾನದ ಉತ್ತರ ಕರ್ನಾಟಕ ಬೀದರ್ ಅಂಚಲ್ ಅಧ್ಯಕ್ಷ ರಾಜಕುಮಾರ ಅಳ್ಳೆ ಹೇಳಿದರು.
ನಗರದ ಸಮರ್ಥ ರಾಮದಾಸ್ ಫಂಕ್ಷನ್ ಹಾಲ್‌ನಲ್ಲಿ ನಡೆದ ಏಕಲ್ ಅಭಿಯಾನದ ಉತ್ತರ ಕರ್ನಾಟಕ ಬೀದರ್ ಅಂಚಲ್ ಸಮನ್ವಯ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲೆಯ ೧೭೫ ಗ್ರಾಮಗಳಲ್ಲಿ ಏಕಲ್ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಒಬ್ಬರೇ ಶಿಕ್ಷಕರು ಇರುವ ಏಕಲ್ ವಿದ್ಯಾಲಯವು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುತ್ತಿದೆ. ಹಿಂದೂ, ಸನಾತನ ಧರ್ಮದ ಅರಿವು ಮೂಡಿಸುತ್ತಿದೆ. ಸ್ವಾವಲಂಬಿ ಭಾರತ ಕಟ್ಟಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಏಕಲ್ ಆನ್ ವ್ಹೀಲ್ ಕಾರ್ಯಕ್ರಮಡಿ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು, ಈಗಾಗಲೇ ೫೫೦ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗಿದೆ. ಏಕಲ್ ಶ್ರೀ ಹರಿ ರಥವು ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಅಭಿಯಾನದ ಕೇಂದ್ರೀಯ ಸಹ ಅಭಿಯಾನ ಪ್ರಮುಖ ದೀಪ ಕುಮಾರ್ ಮಾತನಾಡಿ, ರಾಷ್ಟ್ರದಲ್ಲಿ ೧ ಲಕ್ಷಕ್ಕೂ ಹೆಚ್ಚು ಏಕಲ್ ವಿದ್ಯಾಲಯಗಳು ಇವೆ. ಸರ್ಕಾರದ ನೆರವು ಇಲ್ಲದೆಯೇ ಅಕ್ಷರ ದಾಸೋಹ ಕಾರ್ಯದಲ್ಲಿ ನಿರತವಾಗಿವೆ. ದೇಶವನ್ನು ವಿಶ್ವಗುರು ಆಗಿಸುವ ನಿಟ್ಟಿನಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು.
ಇದೇ ವೇಳೆ ಅಭಿಯಾನದ ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಶಂಕರರಾವ್ ಕೊಟರಗಿ, ಉಪಾಧ್ಯಕ್ಷರಾಗಿ ಸತ್ಯಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷರಾಗಿ ಶಿಲ್ಪಾ ಪಾಟೀಲ, ಕಾರ್ಯದರ್ಶಿಯಾಗಿ ಅರುಣಾ ರಾಜಕುಮಾರ ಅಳ್ಳೆ, ರಥ ಸಮಿತಿಯ ಅಧ್ಯಕ್ಷರಾಗಿ ದತ್ತಾತ್ರಿ ಸಗ್ಗಂ ಹಾಗೂ ಕಾರ್ಯದರ್ಶಿಯಾಗಿ ಸೋಮಶೇಖರ ಸಜ್ಜನ್ ಅವರನ್ನು ನೇಮಕ ಮಾಡಲಾಯಿತು.
ಏಕಲ್ ರಥ ಯೋಜನೆಯ ಪಿ ೧೦ ಪ್ರಭಾಗ ರಥ ಯೋಜನೆ ಪ್ರಭಾಗ ಉಸ್ತುವಾರಿ ರಾಜಕುಮಾರ ಅಗ್ರವಾಲ್ ಅಧ್ಯಕ್ಷತೆ ವಹಿಸಿದ್ದರು.
ವನ ಬಂಧು ಪರಿಷತ್ ದಕ್ಷಿಣ ಭಾರತ ಉಪಾಧ್ಯಕ್ಷೆ ಸಬಿತಾ ಅಗ್ರವಾಲ್, ಏಕಲ್ ಅಭಿಯಾನದ ಪಿ. ೧೦ ಪ್ರಭಾಗ್ ಸಚಿವ ಕರ್ನಲ್ ಅಶೋಕ, ವನ ಬಂಧು ಪರಿಷತ್ ಮಹಿಳಾ ಚಾಪ್ಟರ್‌ನ ಸುಚಿತ್ರಾ, ಸೀತಾ ಗೋಯಲ್, ಡಾ. ರಘು ಕೃಷ್ಣಮೂರ್ತಿ, ಶಂಕರರಾವ್ ಕೊಟರಗಿ, ನೀನಾ ಅಗ್ರವಾಲ್, ರಾಮಕೃಷ್ಣ, ಕೃಷ್ಣಾರೆಡ್ಡಿ, ಪ್ರಭಾಕರ ಮೈಲಾಪುರೆ, ಹನುಮಯ್ಯ ಅರ್ಥಂ, ಶಿವಶರಣಪ್ಪ ಚಿಟ್ಟಾ, ಮಲ್ಲಿಕಾರ್ಜುನ ಚಲುವಾ ಮತ್ತಿತರರು ಉಪಸ್ಥಿತರಿದ್ದರು.
ನಿತೇಶ ಬಿರಾದಾರ ನಿರೂಪಿಸಿದರು. ಸತ್ಯಪ್ರಕಾಶ್ ವಂದಿಸಿದರು.