ನೌಕರರಿಗೆ 371(ಜೆ) ತಿದ್ದುಪಡಿ ಕಾಯ್ದೆ ಸೌಲಭ್ಯಕ್ಕೆ ಪ್ರಯತ್ನ

ಬೀದರ್: ಅ.12:ರಾಜ್ಯ ಸರ್ಕಾರಿ ನೌಕರರಿಗೆ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆಯ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಹೇಳಿದರು.
ನಗರದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಯ್ದೆಯಡಿ ಜಿಲ್ಲೆಯ ಸರ್ಕಾರಿ ನೌಕರರಿಗೆ ವಿವಿಧ ಸೌಲಭ್ಯ ಸಿಗಲಿವೆ ಎಂದು ತಿಳಿಸಿದರು.
ಸದ್ಯ ಸರ್ಕಾರಿ ನೌಕರರಿಗೆ ಸುಸಜ್ಜಿತ ಭವನ ಇದೆ. ಭವನವನ್ನು ಇನ್ನೂ ಹೈಟೆಕ್ ಆಗಿಸುವ ಉದ್ದೇಶ ಇದೆ. ಈ ದಿಸೆಯಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸಂಘವು ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ನೌಕರರಿಗೆ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಜ್ಯೋತಿ ಸಂಜೀವಿನಿ ಯೋಜನೆ ಈಗಾಗಲೇ ಜಾರಿಗೆ ಬಂದಿದೆ. ಮಹಿಳಾ ನೌಕರರಿಗೆ ಋತುಚಕ್ರದ ರಜೆ ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ನೌಕರರ ಏನೇ ಸಮಸ್ಯೆಗಳಿದ್ದರೂ ಪರಿಹರಿಸಲು ಸಂಘ ಸದಾ ಸಿದ್ಧವಿದೆ. ಬರುವ ದಿನಗಳಲ್ಲಿ ಸಂಘ ನೌಕರರ ಹಿತಕ್ಕೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ ಎಂದು ಹೇಳಿದರು. ಇದೇ ವೇಳೆ ನೌಕರರ ಅನೇಕ ಪ್ರಶ್ನೆಗಳಿಗೆ ಸಮಂಜಸ ಉತ್ತರ ಕೂಡ ನೀಡಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರಭುಲಿಂಗ ತೂಗಾಂವೆ, ಸಂಘ 2024-25ನೇ ಸಾಲಿನಲ್ಲಿ ಕೈಗೊಂಡ ಕಾರ್ಯಗಳ ಸಮಗ್ರ ವರದಿ ವಾಚಿಸಿದರು.
ಸಂಘದ ಜಿಲ್ಲಾ ಘಟಕದ ಖಜಾಂಚಿ ದೇವಪ್ಪ ಚಾಂಬೋಳೆ ಮಾತನಾಡಿ, ಸಂಘವು ಜಿಲ್ಲೆಯ ಸರ್ಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತಾ ಬಂದಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ. ವೈಶಾಲಿ ಮಾತನಾಡಿ, ಋತುಚಕ್ರ ರಜೆ ಮಂಜೂರು ಮಾಡಿಸಿದ್ದರಿಂದ ಮಹಿಳಾ ಸರ್ಕಾರಿ ನೌಕರರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದಕ್ಕಾಗಿ ಜಿಲ್ಲಾ ಹಾಗೂ ರಾಜ್ಯ ಘಟಕಕ್ಕೆ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ಮಾತನಾಡಿ, ತಾಲ್ಲೂಕು ಘಟಕಗಳನ್ನು ಬಲಪಡಿಸಲು ಜಿಲ್ಲಾ ಘಟಕ ಅಗತ್ಯ ನೆರವು ನೀಡಬೇಕು ಎಂದು ಹೇಳಿದರು.
ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ ಅವರು ಸಂಘದ ಕಾರ್ಯ ಚಟುವಟಿಕೆ ಕುರಿತು ಮಾತನಾಡಿದರು.
ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷರಾದ ಗೌತಮ ಚಿಂತಲಗೇರಾ, ಮಹಮ್ಮದ್ ಅಬ್ದುಲ್ ಸತ್ತಾರ್, ಉಪಾಧ್ಯಕ್ಷರಾದ ಶ್ರೀಕಾಂತ ಪಾಟೀಲ, ಮುಕರಂದ ಕುಲಕರ್ಣಿ, ಕಮಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಸುನೀಲಕುಮಾರ ಕಸ್ತೂರೆ, ಚಿಟಗುಪ್ಪ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಉಪ್ಪಿನ್, ಹುಲಸೂರು ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಹಾವಣ್ಣ, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಪಂಢರಿ ಆಡೆ ಉಪಸ್ಥಿತರಿದ್ದರು.
ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶಿವರಾಜ ಕಪಲಾಪುರೆ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಮನೋಹರ ಕಾಶಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ವಿದ್ಯಾಸಾಗರ್ ವಂದಿಸಿದರು.