
ಗುರುಮಠಕಲ್,ಅ.೩೧: ಗುರುಮಠಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಕಲವಾರ್ ಬೇಸ್ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆ ಹಾಗೂ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಸಾರ್ವಜನಿಕ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಮೊದಲು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಲಭ್ಯವಿರುವ ಉಚಿತ ಆರೋಗ್ಯ ಸೇವೆಗಳು, ಉಚಿತ ಔಷಧೋಪಚಾರ, ಆರೋಗ್ಯ ತಪಾಸಣೆ, ಗರ್ಭಿಣಿಯರು ಹಾಗೂ ಮಕ್ಕಳಿಗೆ ದೊರೆಯುವ ಆರೋಗ್ಯ ಸೌಲಭ್ಯಗಳ ಕುರಿತು ತಿಳಿದುಕೊಂಡರು. ಆಸ್ಪತ್ರೆಯ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಆರೋಗ್ಯ ಸೇವೆಗಳ ಮಹತ್ವ, ಸ್ವಚ್ಛತೆ ಹಾಗೂ ಪರಿಸರ ರಕ್ಷಣೆಯ ಕುರಿತು ಮಾಹಿತಿ ನೀಡಿದರು. ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಅಗತ್ಯತೆಯ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ನಂತರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು, ಅಲ್ಲಿನ ಸ್ವಚ್ಛತೆ, ಪ್ರಯಾಣಿಕರಿಗೆ ಅನುಕೂಲವಾಗುವ ಸೂಚನಾ ಫಲಕಗಳು, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳುವ ಆಸನಗಳು ಹಾಗೂ ಇತರ ಸಾರ್ವಜನಿಕ ಸೌಲಭ್ಯಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಕಂಟ್ರೋಲರ್ ಅವರು ವಿದ್ಯಾರ್ಥಿಗಳಿಗೆ, ಕಸವನ್ನು ಎಲ್ಲೆಡೆ ಎಸೆಯದೆ ಕಸದ ಬುಟ್ಟಿಗೆ ಹಾಕಬೇಕು, ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಬೇಕು, ಬಸ್ ನಿಂತಾಗ ಮಾತ್ರ ಬಸ್ ಹತ್ತಬೇಕು, ಹಿರಿಯರು ಮತ್ತು ಗರ್ಭಿಣಿಯರಿಗೆ ಸಹಾಯ ಮಾಡಬೇಕು, ನಿಯಮ ಪಾಲನೆ ಮಾಡಬೇಕು ಹಾಗೂ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು ಎಂಬ ಅರಿವನ್ನು ನೀಡಿದರು.
ಈ ಶೈಕ್ಷಣಿಕ ಭೇಟಿಯ ಉದ್ದೇಶ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದ ಜೊತೆಗೆ ನೈಜ ಜೀವನದ ಅನುಭವ, ಸಾರ್ವಜನಿಕ ಸೌಲಭ್ಯಗಳ ಸದ್ಬಳಕೆ, ಸಾಮಾಜಿಕ ಜವಾಬ್ದಾರಿ, ಸ್ವಚ್ಛತೆ ಹಾಗೂ ನಾಗರಿಕ ಕರ್ತವ್ಯಗಳ ಕುರಿತು ಅರಿವು ಮೂಡಿಸುವುದಾಗಿದೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವಿಧ ಸಾರ್ವಜನಿಕ ಸ್ಥಳಗಳ ಮಹತ್ವ, ಸ್ವಚ್ಛತೆಯ ಅಗತ್ಯತೆ, ಪರಿಸರ ಸಂರಕ್ಷಣೆ, ಶಿಸ್ತು, ಸಮಯಪಾಲನೆ ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆಯ ಜವಾಬ್ದಾರಿಗಳ ಕುರಿತು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು , ಸಹಶಿಕ್ಷಕರು ಅತಿಥಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





















