ಶೈಕ್ಷಣಿಕ ಪ್ರವಾಸ ಉತ್ಸವ ರೂಪದಲ್ಲಿರಲಿ : ಪ್ರಸನ್ನಕುಮಾರ

ಭಾಲ್ಕಿ :ಮೇ.೩೧: ಸುಮಾರು ಎರಡು ತಿಂಗಳಕಾಲ ರಜೆಯಮೇಲಿದ್ದ ವಿದ್ಯಾರ್ಥಿಗಳು, ಶಾಲಾ ಪ್ರಾರಂಭದ ದಿನವನ್ನು ಉತ್ಸವರೀತಿಯಲ್ಲಿ ಪ್ರಾರಂಭಿಸಿದರೆ, ಶೈಕ್ಷಣಿಕ ಪ್ರವಾಸ ಉತ್ಸವ ರೂಪದಲ್ಲಿರುತ್ತದೆ ಎಂದು ಡಯಟ್ ಪ್ರಾಂಶುಪಾಲರೂ ಹಾಗು ಉಪನಿರ್ದೇಶಕರು (ಅಭಿವೃದ್ಧಿ) ಪ್ರಸನ್ನ ಕುಮಾರ ಅಭಿಪ್ರಾಯಪಟ್ಟರು.
ತಾಲೂಕಿನ ಮದಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ಸವದ ರೀತಿಯಲ್ಲಿ ಶಾಲೆ ಪ್ರಾರಂಭಿಸಿ, ಮುಂದಿನ ಶಿಕ್ಷಣಕ್ಕೆ ಉತ್ತಮ ರೀತಿಯಿಂದ ಅನುವು ಮಾಡಿಕೊಡುವುದೇ ಶಾಲಾ ಪ್ರಾರಂಭೋತ್ಸವದ ಮೂಲ ಉದ್ದೇಶವಾಗಿದೆ. ಶಾಲಾ ಆರಂಭ ವೈಜ್ಞಾನಿಕವಾಗಿ, ಉತ್ಸವದ ರೀತಿಯಲ್ಲಿ ನಡೆಸಿ, ಅಧ್ಯಯನದಲ್ಲಿ ಆಸಕ್ತಿ ಮೂಡಿಸುವುದೇ ಪ್ರಾರಂಭೋತ್ಸವದ ಧ್ಯೇಯವಾಗಿದೆ. ಶಿಕ್ಷಕರು ತೊಡಗಿಸಿಕೊಳ್ಳುವಿಕೆಯಿಂದ ಉತ್ತಮ ಸಾಧನೆ ಮಾಡಬಹುದು ಎನ್ನುವುದಕ್ಕೆ ಮದಕಟ್ಟಿ ಸರ್ಕಾರಿ ಶಾಲೆಯೇ ಸಾಕ್ಷಿಯಾಗಿದೆ. ಎಲ್ಲಾ ಶಿಕ್ಷಕರು ಉತ್ತಮವಾಗಿ ತೊಡಗಿಸಿಕೊಳ್ಳುವುದರಿಂದ ಯಾವುದೇ ಕಾನ್ವೆಂಟ್ ಶಾಲೆಗೂ ಮೀರಿಸುವ ರೀತಿಯಲ್ಲಿ ಇಲ್ಲಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದಿದ್ದಾರೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಮಾತನಾಡಿ, ನೂರು ಜನ ಶಿಕ್ಷಕರಿಗೆ ಒಬ್ಬ ತಾಯಿ ಸಮಾನ, ಹೀಗಾಗಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಶ್ರಮ ಪಡೆಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣದೊಂದಿಗೆ, ವಿದ್ಯಾರ್ಥಿಗಳಿಗಾಗಿ ಹಲವಾರು ಸೌಲಭ್ಯಗಳಿವೆ, ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಮಾತನಾಡಿ, ಫಲಿತಾಂಶದ ಫಲಾಪೇಕ್ಷೆಯಂತೆ ಕಾರ್ಯನಿರ್ವಹಿಸಬೇಕು. ಕೆಲಸ ಮಾಡುವಾಗ ಭಕ್ತಿಯಿಂದ ಮಾಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ತುರ್ತು ಪರಿಸ್ಥಿತಿ ಬರುವ ಮುನ್ನವೇ ಚಿಕಿತ್ಸೆ ಕೊಡಬೇಕು. ಹಾಗೆಯೇ ವಿದ್ಯಾರ್ಥಿಗಳಿಗೆ ಜೂನ್ ನಿಂದಲೇ ಉತ್ತಮ ಶಿಕ್ಷಣ ನೀಡಿದರೆ ಪರೀಕ್ಷೆಯಲ್ಲಿ ಸರಿಯಾಗಿ ಬರೆದು, ಉತ್ತಮ ಫಲಿತಾಂಶ ನೀಡುವರು ಎಂದು ಹೇಳಿದರು.
ಇದೇವೇಳೆ ೨೦೨೫ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ಸರ್ಕಾರಿ ಶಾಲೆಗಳಲ್ಲಿ ತಾಲೂಕಿಗೆ ಪ್ರಥಮ ಬಂದ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಪ್ರತಿ ವಿಷಯಗಳಲ್ಲಿ ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಷಯ ಶಿಕ್ಷಕರು ವೈಯಕ್ತಿಕ ಬಹುಮಾನ ವಿತರಿಸಿದರು.
ಡಯಟ್ ಉಪನ್ಯಾಸಕ ಮಹಾದೇವ ಸಜ್ಜನ್, ಶಿವಶಂಕರ ಸ್ವಾಮಿ ಮಾತನಾಡಿದರು. ಮುಖ್ಯ ಶಿಕ್ಷಕ ಅಶೋಕ ಬರ್ಮಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇಸಿಓ ಮಲ್ಲಿಕಾರ್ಜುನ ಕನ್ನಾಳೆ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಖಂಡಾಳೆ, ಡಯಟ್ ಉಪನ್ಯಾಸಕ ಶಿವಾಜಿ ಧನ್ನೆ, ಸಿಆರ್‌ಪಿ ಅಶೋಕಕುಮಾರ ಕಲ್ಯಾಣೆ, ಚನ್ನಬಸಪ್ಪ ತಳವಾಡೆ, ವಿಜಯಕುಮಾರ ಹುಡಗೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಮುಖಂಡರಾದ ಲಿಂಗರಾಜ ಖಂಡಾಳೆ, ಕಲ್ಲಪ್ಪ ಮಿರಾಜದಾರ, ಕವಿರತ್ನ ಬರ್ಮಾ, ದೀಪಕ ಹೊನ್ನಾಳೆ, ಶಿವಶರಣಪ್ಪ, ಹಣಮಂತ ಕಾರಾಮುಂಗೆ, ದೀಪಕ ಥಮಕೆ, ಬಾಲಾಜಿ ಕಾಂಬಳೆ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಭಾವತಿ ಸ್ವಾಗತಿಸಿದರು. ಹಣಮಂತ ಕಾರಾಮುಂಗೆ ನಿರೂಪಿಸಿದರು. ಶಿವಶರಣಪ್ಪ ಬಿರಾದಾ ವಂದಿಸಿದರು.