ಔರಾದ್ :ಜೂ.13: ಸಮಾಜದಲ್ಲಿ ಬೇರು ಬಿಟ್ಟಿರುವ ಹಲವು ಸಾಮಾಜಿಕ ಪಿಡುಗುಗಳಿಗೆ ಶಿಕ್ಷಣವೇ ಅಸ್ತ್ರ. ಅದರಂತೆ, ಬಾಲಕಾರ್ಮಿಕ ಪದ್ಧತಿ ನಿವಾರಣೆಯಾಗಬೇಕಾದರೆ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಗುರುವಾರ ಕಾರ್ಮಿಕ ಇಲಾಖೆ, ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ನಿಮಿತ್ತ ಆಯೋಜಿಸಿದ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಅರಿವಿನ ಕೊರತೆಯಿಂದಾಗಿಯೇ ಇಂತಹ ಪದ್ಧತಿಗಳು ಇಂದಿಗೂ ಜೀವಂತವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಮಿಕ ನಿರೀಕ್ಷಕ ರಾಹುಲ್ ರತ್ನಾಕರ್ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಳ್ಳದಂತೆ ತಿಳಿಸಿದರು. ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಾಗ ಕಠಿಣ ಶಿಕ್ಷೆಗೆ ಗುರು ಪಡಿಸಲಾಗುವುದು ಎಂದರು.
ವಿವಿಧ ಶಾಲೆಯ ಮಕ್ಕಳು, ಮುಖ್ಯ ಶಿಕ್ಷಕರು, ಶಿಕ್ಷಕರ ಸಹಕಾರದಿಂದ ಜಾಥಾ ನ್ಯಾಯಾಲಯ ಆವರಣದಿಂದ ಬಸ್ ನಿಲ್ದಾಣದ ವರೆಗೂ ನೆರವೇರಿತು.
ಈ ಸಂದರ್ಭದಲ್ಲಿ ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ವಿನಾಯಕ ವಾನಖಾಂಡೆ, ವಕೀಲರ ಸಂಘದ ಅಧ್ಯಕ್ಷ ಬಾಲಾಜಿ ಕಂಬಾರ, ಶ್ರೀಧರ, ರಘುನಾಥ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸುನೀಲ ವಾಘಮಾರೆ, ಹಣಮಂತ ಮುಕ್ತೆದಾರ್, ಸುಭಾಷ್ ಸಾಕ್ರೆ ಸೇರಿದಂತೆ ಇನ್ನಿತರರಿದ್ದರು.