
ಬೀದರ್:ಜೂ.8:ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪೆÇ್ರ. ಸಿದ್ರಾಮಪ್ಪ ಮಾಸಿಮಾಡೆ ಅಭಿಪ್ರಾಯಪಟ್ಟರು.
ಋಷಿಕೇಶ ಶಿಕ್ಷಣ ಸಂಸ್ಥೆಯ ಸಂಚಾಲಿತ ನಗರದ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಜ್ಞಾನಾರ್ಜನೆ ಮಾಡಬೇಕು. ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಮಣಗೇರೆ ಮಾತನಾಡಿ, ಆಳಾಗಿ ದುಡಿ, ಅರಸನಾಗಿ ಉಣ್ಣು ಎಂಬ ಗಾದೆ ಮಾತಿದೆ. ಹಾಗೆಯೇ ಜೀವನದಲ್ಲಿ ಕಷ್ಟ ಪಟ್ಟವರಿಗೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕುಶಾಲರಾವ್ ಪಾಟೀಲ ಗಾದಗಿ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಬಹು ಮುಖ್ಯವಾಗಿದೆ ಎಂದು ತಿಳಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿ ಸಾಧನೆಗೈದ ಶಾಲೆಯ
ಸಾಯಿನಾಥ ಶ್ರೀಪತಿ, ವೈಷ್ಣವಿ ಜಗನ್ನಾಥ, ಅನಿತಾ ರಾಜಕುಮಾರ, ತಪಸ್ಯಾ ಶ್ರವಣ, ಪ್ರೀತಿ, ನೀಲಕಂಠ, ಅಭಿಷೇಕ ಚಂದ್ರಕಾಂತ, ಅಖಿಲೇಶ ಕಾಶಿನಾಥ, ಭಾಗ್ಯಶ್ರೀ ರಮೇಶ, ವಿದ್ಯಾನಂದ ಶಿವಲಿಂಗಯ್ಯ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಶಾಲೆ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ, ಶಿಕ್ಷಕರು ಇದ್ದರು. ನೀಲಮ್ಮ ಗಜಲೆ ನಿರೂಪಿಸಿದರು.