
ಕುಣಿಗಲ್, ಅ. ೨- ತಾಲ್ಲೂಕಿನ ಎಡೆಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡ ಮಧುರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು.
ಶಾಲೆಗೆ ದಿಡೀರ್ ಭೇಟಿ ನೀಡಿ ಮಕ್ಕಳು ಹಾಗೂ ಶಾಲೆಯನ್ನು ಪರಿಶೀಲಿಸಿ ಶಾಲೆಗೆ ಅಗತ್ಯ ಇರುವ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಬೇಕು. ಶಾಲಾ ಆವರಣವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು, ಶಾಲೆಗೆ ಬೇಕಾಗಿರುವ ಶಿಕ್ಷಕರು ಒಳಗೊಂಡಂತೆ >ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎಲ್ಲಾ ತರಗತಿ ಕೊಠಡಿಗಳಿಗೆ ಭೇಟಿ ನೀಡಿ ಮಕ್ಕಳಿಂದ ಪಾಠ ಓದಿಸಿದ್ದಾರೆ. ಶಾಲೆಯಲ್ಲಿ ಕಾಲ ಕಾಲಕ್ಕೆ ಪಾಠ ನಡೆಯುವುದರ, ಮಧ್ಯಾಹ್ನದ ಬಿಸಿಯೂಟ ಹಾಗೂ ಶೌಚಾಲಯದ ಬಗ್ಗೆ, ಮಕ್ಕಳಿಂದ ಮಾಹಿತಿ ಪಡೆದುಕೊಂಡರು. ನಂತರ ಬಿಸಿಯೂಟ ತಯಾರು ಮಾಡುವ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳ ಜತೆ ಬಿಸಿಯೂಟ ಸವಿದು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ, ಅಧಿಕಾರಿಗಳಿಗೆ, ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಸರ್ಕಾರಿ ಶಾಲೆಗೆ ಪ್ರೋತ್ಸಾಹ ನೀಡುತ್ತಿರುವ ಗ್ರಾಮದ ಮೈತ್ರಿ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ವಿ ಅಶ್ವಿಜ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್ ಬಿಇಓ ಮಮತಾಮಣಿ, ಸಹಾಯಕ ನಿರ್ದೇಶಕ ಕಾಂತರಾಜು, ಪಿಡಿಓ ಚಂದ್ರಹಾಸ್, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು,ಮೈತ್ರಿ ಸಂಘದ ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


























