ಪರಂಗೆ ಇಡಿ ಸಮನ್ಸ್ ಜಾರಿ ಸಾಧ್ಯತೆ

ಬೆಂಗಳೂರು, ಮೇ ೨೩- ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸದ್ಯದಲ್ಲೇ ಸಮನ್ಸ್ ಜಾರಿ ಮಾಡುವ ಸಾಧ್ಯತೆಗಳಿವೆ.


ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ. ನಿನ್ನೆ ಮತ್ತು ಮೊನ್ನೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು.

ಈ ಎಲ್ಲ ದಾಖಲೆಗಳನ್ನು ಬೆಂಗಳೂರಿನ ಇ.ಡಿ. ಅಧಿಕಾರಿಗಳು ದೆಹಲಿಯ ಪ್ರಧಾನ ಕಚೇರಿಗೆ ಕಳುಹಿಸಿ ಕೊಟ್ಟಿದ್ದು, ಸದ್ಯದಲ್ಲೇ ವಿಚಾರಣೆಗೆ ಹಾಜರಾಗುವಂತೆ ಗೃಹ ಸಚಿವರಿಗೆ ಇ.ಡಿ. ಸಮನ್ಸ್ ಜಾರಿ ಮಾಡಲಿದೆ ಎಂದು ಇ.ಡಿ. ಮೂಲಗಳು ಹೇಳಿವೆ.


ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಡಿಜಿಪಿ ರಾಮಚಂದ್ರರಾವ್ ಅವರ ಮಲ ಮಗಳು ರನ್ಯಾರಾವ್ ಅವರ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಿರುವ ದಾಖಲೆ ಇ.ಡಿ.ಗೆ ಲಭ್ಯವಾಗಿದ್ದು, ಈ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಇ.ಡಿ. ಗೃಹ ಸಚಿವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಿದೆ ಎಂದು ಹೇಳಲಾಗಿದೆ.