ಪರಂ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಅಂತ್ಯ

ತುಮಕೂರು, ಮೇ ೨೨- ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಇಂದು ಮಧ್ಯಾಹ್ನದವರೆಗೂ ಅಗತ್ಯ ಕಡತಗಳು, ದಾಖಲಾತಿಗಳ ಪರಿಶೀಲನೆ ನಡೆಸಿ, ಸಂಸ್ಥೆಯ ಆರ್ಥಿಕ ವ್ಯವಹಾರದ ಮಾಹಿತಿ ಕಲೆ ಹಾಕಿ ಶೋಧ ಕಾರ್ಯವನ್ನು ಅಂತ್ಯಗೊಳಿಸಿದ್ದಾರೆ.


ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ ಒಳಪಡುವ ನೆಲಮಂಗಲದ ಟಿ. ಬೇಗೂರಿನ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು, ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜು, ಹೆಗ್ಗೆರೆ ಬಳಿ ಇರುವ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇತ್ತೀಚೆಗಷ್ಟೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಖರೀದಿಸಿರುವ ಕ್ಯಾತ್ಸಂದ್ರ ಸಮೀಪದ ಮಂಚಕಲ್‌ಕುಪ್ಪೆ ಬಳಿ ಇರುವ ಹೆಚ್‌ಎಂಎಸ್‌ಐಟಿ ಕಾಲೇಜಿನಲ್ಲಿ ಸತತ ೨೭ ಗಂಟೆಗಳ ಕಾಲ ದಾಖಲಾತಿಗಳ ಶೋಧ ಕಾರ್ಯ ನಡೆಸಿದ ಇ.ಡಿ. ಅಧಿಕಾರಿಗಳು ಇಂದು ಮಧ್ಯಾಹ್ನ ೧೨.೩೦ರ ವೇಳೆಗೆ ಶೋಧ ಕಾರ್ಯವನ್ನು ಅಂತ್ಯಗೊಳಿಸಿ ಕಾಲೇಜುಗಳಿಂದ ತೆರಳಿದರು ಎಂದು ತಿಳಿದು ಬಂದಿದೆ.


ನಿನ್ನೆ ಬೆಳಿಗ್ಗೆ ೯.೩೦ ರಿಂದ ತಡರಾತ್ರಿವರೆಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಲ್ಲಿ ಲೆಕ್ಕಪತ್ರ ದಾಖಲೆಗಳ ಪರಿಶೀಲನೆ ಸೇರಿದಂತೆ ಮೆಡಿಕಲ್ ಸೀಟುಗಳು, ಎಂಜಿನಿಯರಿಂಗ್ ಸೀಟುಗಳು ಹಾಗೂ ಆರ್ಥಿಕ ವ್ಯವಹಾರದ ಮಾಹಿತಿಗಳನ್ನು ಕಲೆ ಹಾಕಿದ್ದ ಜಾರಿ ನಿರ್ದೇಶನಾಲಯದ ೩೦ಕ್ಕೂ ಅಧಿಕ ಅಧಿಕಾರಿಗಳು ಇಂದು ಬೆಳಿಗ್ಗೆ ೬ ಗಂಟೆಯಿಂದಲೇ ಈ ಕಾಲೇಜುಗಳಲ್ಲಿ ಅಗತ್ಯ ದಾಖಲೆಗಳ ಕಲೆ ಹಾಕಿದರು.


ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮುಖ್ಯಲೆಕ್ಕಾಧಿಕಾರಿ ಸತೀಶ್ ಚಂದ್ರ ಬಾಬು ಅವರು ನಿನ್ನೆ ತಮ್ಮ ಮಗಳ ಮದುವೆ ನಿಮಿತ್ತ ರಜೆಯಲ್ಲಿದ್ದರಿಂದ ಇ.ಡಿ. ಅಧಿಕಾರಿಗಳಿಗೆ ಸಮರ್ಪಕವಾದ ಆರ್ಥಿಕ ವ್ಯವಹಾರದ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ಹೇಳಲಾಗಿದ್ದು, ಇಂದು ಇ.ಡಿ. ಅಧಿಕಾರಿಗಳ ಸೂಚನೆ ಮೇರೆಗೆ ಮುಖ್ಯ ಲೆಕ್ಕಾಧಿಕಾರಿ ಸತೀಶ್‌ಚಂದ್ರ ಬಾಬು ಅವರು ಕರ್ತವ್ಯಕ್ಕೆ ಹಾಜರಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಂಸ್ಥೆಯ ಆರ್ಥಿಕ ವ್ಯವಹಾರದ ಲೆಕ್ಕಪತ್ರಗಳ ಮಾಹಿತಿಯನ್ನು ಒದಗಿಸಿದರು ಎಂದು ಹೇಳಲಾಗಿದೆ.


ಈ ಮಧ್ಯೆ ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರನಟಿ ರನ್ಯಾರಾವ್ ಖಾತೆಗೆ ೪೦ ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದ್ದು, ಸಿದ್ದಾರ್ಥ ಶಿಕ್ಷಣ ಸಂಸ್ಥೆ ಟ್ರಸ್ಟ್ ಮೂಲಕ ರನ್ಯಾರಾವ್ ಕ್ರೆಡಿಟ್ ಕಾರ್ಡ್‌ಗೆ ೪೦ ಲಕ್ಷ ರೂ. ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ೧೬ ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.


ನೆಲಮಂಗಲ ಟಿ. ಬೇಗೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಹಾಗೂ ಹೆಗ್ಗೆರೆಯ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಡಳಿತ ಕಚೇರಿ, ಪ್ರಾಂಶುಪಾಲರ ಕಚೇರಿ, ಎಂಜಿನಿಯರಿಂಗ್ ಕಾಲೇಜಿನ ಲೆಕ್ಕಾಧಿಕಾರಿಗಳ ಶಾಖೆ, ಪ್ರಾಂಶುಪಾಲರ ಕಚೇರಿ, ಆಡಳಿತ ಕಚೇರಿ ಸೇರಿದಂತೆ ವಿವಿಧ ಬ್ಲಾಕ್‌ಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯ ಮುಗಿಸಿ ತೆರಳಿದ್ದಾರೆ.


ತುಮಕೂರಿನ ಎಸ್‌ಎಸ್‌ಐಟಿ ಕಾಲೇಜು ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಇಂದು ಸಹ ವಿದ್ಯಾರ್ಥಿಗಳ ಐ.ಡಿ. ಕಾರ್ಡ್ ಪರಿಶೀಲಿಸಿಯೇ ಕಾಲೇಜು ಒಳಗೆ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಯನ್ನು ಹೊರತುಪಡಿಸಿದರೆ ಉಳಿದವರ ಕಾಲೇಜು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.


ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲಾತಿಗಳ ಶೋಧ ಕಾರ್ಯದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಈ ಕಾಲೇಜುಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಲೆಕ್ಕಪತ್ರ ಮಾಹಿತಿ ನೀಡಿದ್ದೇವೆ


ಜಾರಿ ನಿರ್ದೇಶನಾಲಯ (ಇಡಿ)ಅಧಿಕಾರಿಗಳು ನಮ್ಮ ಕಾಲೇಜಿಗೆ ಬಂದು ಕೇಳಿದ ಲೆಕ್ಕಪತ್ರದ ಮಾಹಿತಿಯನ್ನು ನೀಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿದ್ದಾರೆ.


ಇಡಿ ಅಧಿಕಾರಿಗಳು ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಕೇಳಿದರೂ ನೀಡಿ ಎಂದು ನಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.


ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ, ಅವರಿಗೆ ಸಹಕಾರ ಕೊಟ್ಟಿದ್ದೇವೆ. ನಾನು ಕಾನೂನಿಗೆ ಬೆಲೆ ಕೊಟ್ಟು ಬಂದವನು ನಾನು. ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ಗೌರವ ಕೊಡುತ್ತೇನೆ . ಇಡಿ ಅಧಿಕಾರಿಗಳು ಏನು ಬೇಕಾದರೂ ಪರಿಶೀಲನೆ ಮಾಡಲಿ. ನಾವು ಕೂಡ ಸಹಕಾರ ನೀಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.


ದಲಿತ ಎಂಬ ಕಾರಣಕ್ಕೆ ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ರಣದೀಪ್ ಸುರ್ಜೇವಾಲ ಆರೋಪ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಇಂಥ ವಿಚಾರಗಳಲ್ಲಿ ಯಾರೂ ಜಾತಿ ನೋಡಿ ಬರುವುದಿಲ್ಲ. ಆ ಬಗ್ಗೆ ಈಗ ನಾನು ಏನೂ ಹೇಳುವುದಿಲ್ಲ ಎಂದರು.


ನಮ್ಮ ಶಿಕ್ಷಣ ಸಂಸ್ಥೆಯು ಸ್ಥಾಪನೆಯಾಗಿ ೬೮ ವರ್ಷಗಳೇ ಆಗಿವೆ. ನಮ್ಮ ತಂದೆ ಕಾಲದಿಂದಲೂ ಸಂಸ್ಥೆ ನಡೆಯುತ್ತಿದೆ. ಸಿದ್ದಾರ್ಥ ಸಂಸ್ಥೆಯಲ್ಲಿ ಕಲಿತು ೪೦ ಸಾವಿರ ಮಂದಿ ಎಂಜಿನಿಯರ್ ಆಗಿದ್ದಾರೆ. ನಮ್ಮ ಸಂಸ್ಥೆಯ ಮೂಲಕ ೧೦ ಸಾವಿರ ಮಂದಿ ವೈದ್ಯರಾಗಿದ್ದಾರೆ. ಜಾರಿ ನಿರ್ದೇಶನಾಲಯ ಇಲ್ಲಿಯವರೆಗೆ ಏನೂ ಹೇಳಿಲ್ಲ.ಶಫಿ ಅಹ್ಮದ್ ಅವರ ಶಿಕ್ಷಣ ಸಂಸ್ಥೆಯನ್ನೂ ಖರೀದಿ ಮಾಡಿದ್ದೇವೆ, ಇಡಿ ವಿಚಾರಣೆ ನಡೆಯುತ್ತಿದೆ, ಹೆಚ್ಚಿನದ್ದೇನನ್ನೂ ವಿವರಿಸಲು ಆಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.


ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಅಧೀನದಲ್ಲಿರುವ ವಿವಿಧ ಕಾಲೇಜುಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿನ್ನೆ ಬೆಳಗ್ಗೆ ಆರಂಭಿಸಿದ್ದ ದಾಳಿಯು ಇಂದು ಮುಂದುವರಿದಿದೆ. ಏತನ್ಮಧ್ಯೆ, ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಖಾತೆಗೆ ೪೦ ಲಕ್ಷ ರೂ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆದಿದೆ ಎಂದು ಕೆಲವು ಮೂಲಗಳು ಹೇಳಿವೆ.