ಸೈನಿಕ ಶಾಲೆಯ ವಿದ್ಯಾರ್ಥಿಗಳಿಂದ ಗ್ರಹಣ ದರ್ಶನ

ಬೀದರ್:ಸೆ.8: ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯ ಬೀದರ್ ನ ಸೈನಿಕ್ ಶಾಲೆ ಹಾಗೂ ಜಿಲ್ಲಾ ವಿಜ್ಞಾನ ಸಮಿತಿ ಸಂಯುಕ್ತ ಆಶ್ರಯದಲ್ಲಿ, ಬಿ.ವಿ.ಭೂಮರಡ್ಡಿ ಕಾಲೇಜು ಕ್ಯಾಂಪಸ್‍ನಲ್ಲಿ ಆವರಣದಲ್ಲಿ ನಿನ್ನೆ ತಡರಾತ್ರಿ ಬಾಹ್ಯಾಕಾಶದಲ್ಲಿ ನಡೆದ ವಿಸ್ಮಯವನ್ನು ಸೈನಿಕ ಶಾಲೆಯ ನೂರಾರು ವಿದ್ಯಾರ್ಥಿಗಳು, ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಕಣ್ತುಂಬಿಕೊಂಡರು.
ಸಂಪೂರ್ಣ ರಕ್ತಚಂದ್ರಗ್ರಹಣ ವೀಕ್ಷಣಗೆ ಟೆಲಿಸ್ಕೋಪ್ ಹಾಗೂ ಬೈನಾಕುಲರ್ ವ್ಯವಸ್ಥೆ ಮಾಡಲಾಗಿತ್ತು. ಗ್ರಹಣದ ದೃಶ್ಯಗಳನ್ನು ಯೂಟ್ಯೂಬ್‍ನಲ್ಲಿ ನೇರ ಪ್ರಸಾರ ಮಾಡಲಾಯಿತು. ಚಂದ್ರ ಗ್ರಹಣವನ್ನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೋರಿಸಲಾಯಿತು.
ಅದೇ ರೀತಿ ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನು ಮಾಡಬಾರದು ಎಂಬ ಮೂಡನಂಬಿಕೆ ಇದ್ದು ಇದನ್ನು ಅಲ್ಲಗಳೆದು ಸೈನಿಕ ಶಾಲೆಯ ಅಲ್ಪೋಪಹಾರ ನೀಡುವ ಮೂಲಕ ಮಕ್ಕಳಿಗೆ ವೈಚಾರಿಕತೆಯ ಪಾಠ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಬಾಬುರಾವ್ ದಾನಿ, ಗ್ರಹಣ ಎಂಬುದು ಬಾಹ್ಯಾಕಾಶದಲ್ಲಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದರ ಬಗ್ಗೆ ಕೆಲವು ಮೂಡನಂಬಿಕೆಗಳಿದ್ದು ಅವೆಲ್ಲ ಕೇವಲ ಕಪೆÇೀಲ ಕಲ್ಪಿತ ಯೋಚನೆಗಳಾಗಿವೆ. ಊಟ ಮಾಡಬಾರದು, ಗ್ರಹಣದ ಪೂರ್ವದಲ್ಲಿ ಮತ್ತು ನಂತರ ಸ್ನಾನ ಮಾಡಬೇಕು ಎಂಬ ಸಂಪ್ರದಾಯಗಳನ್ನು ಮಾಡಲಾಗಿದೆ ಆದರೆ ಅದೆಲ್ಲವೂ ಗೊಡ್ಡು ಆಚರಣೆಗಳಾಗಿದ್ದು ಗ್ರಹಣದಿಂದ ಮನುಷ್ಯರಿಗೆ ಯಾವುದೇ ತೊಂದರೆಗಳಾಗುವುದಿಲ್ಲ ಎಂದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರಜನೀಶ್ ವಾಲಿ ಮಾತನಾಡಿ, ಬ್ಲಡ್ ಮೂನ್ ಎಂದೂ ಕರೆಯಲ್ಪಡುವ ಸಂಪೂರ್ಣ ಚಂದ್ರಗ್ರಹಣವೂ ಚಂದ್ರನು ಭೂಮಿಯ ನೆರಳಿನ ಮೂಲಕ ಹಾದು ಹೋಗುವಾಗ ಚಂದ್ರನು ಗಾಢ ಕೆಂಪು-ಕಿತ್ತಳೆ ಬಣ್ಣಕ್ಕೆ ತಿರುಗುತ್ತಾನೆ ಹಾಗೂ ಇದು ವಾತಾವರಣದಲ್ಲಿ ಸೂರ್ಯನ ಬೆಳಕಿನ ಚದುರುವಿಕೆಯಿಂದ ಉಂಟಾಗುವ ಪರಿಣಾಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿ. ವಿ. ಬಿ ಕಾಲೇಜಿನ ಪ್ರಾಂಶುಪಾಲ ಡಾ. ವಿಠಲ ರೆಡ್ಡಿ, ಉತ್ತರ ಕರ್ನಾಟಕ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಆದೀಶ್ ವಾಲಿ, ಸೈನಿಕ ಶಾಲೆಯ ಪ್ರಾಂಶುಪಾಲರಾದ ಡಾ.ಶ್ರೀಲತಾ ಸ್ವಾಮಿ, ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕಲಾಲ ದೇವಿ ಪ್ರಸಾದ್, ಜಿಲ್ಲಾ ವಿಜ್ಞಾನ ಕೇಂದ್ರದ ಜಂಟಿ ಕಾರ್ಯದರ್ಶಿ ಮಹಮ್ಮದ್ ರಫಿ ತಾಳಿಕೋಟಿ ಉಪಸ್ಥಿತರಿದ್ದರು.