ಡ್ರಗ್ ಫೆಡ್ಲರ್ ಬಂಧನ:೨೩.೭೪ ಕೋಟಿ ಡ್ರಗ್ಸ್ ವಶ

ಬೆಂಗಳೂರು ನಗರ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವ ಸುಮಾರು ೨೩ ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ರವರು ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಇದ್ದಾರೆ.

ಬೆಂಗಳೂರು,ನ.೨೫-ಮಾದಕ ವಸ್ತುಗಳ ಸಾಗಾಣೆ ಮಾರಾಟದ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ನೈಜೀರಿಯಾದ ಕುಖ್ಯಾತ ಡ್ರಗ್ ಫೆಡ್ಲರ್ ನನ್ನು ಬಂಧಿಸಿ ೨೩.೭೪ ಕೋಟಿ ಮೌಲ್ಯದ,ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ನೈಜೀರಿಯಾದ ಇಜಿಕೀ ಇಂಜಿಗೋ(೪೨) ಬಂಧಿತ ಆರೋಪಿಗಳಾಗಿದ್ದು, ಯಲಹಂಕದ ಸಾತನೂರು ರಸ್ತೆಯ ಬಳಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಆರೋಪಿಯಿಂದ ೨೩.೭೪ ಕೋಟಿ ಮೌಲ್ಯದ
೧೧ಕೆ.ಜಿ ೬೪೦ ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, ೧,೦೪೦ ಎಕ್ಸ್ ಟೆನ್ಸಿ ಪಿಲ್ಸ್ ಗಳು, ೨ ಕೆಜಿ ೨೩೫ ಗ್ರಾಂ ಡ್ರಗ್ ತಯಾರಿಕೆಯ ಕಚ್ಚಾ ಸಾಮಾಗ್ರಿಗಳು, ಮೊಬೈಲ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.


ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಬಾಗಲೂರು ಬಳಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮಾದಕವಸ್ತು ಮಾರಾಟ ಜಾಲವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


ಆರೋಪಿಯ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿದೇಶಿ ನಾಗರಿಕರಿಗೆ ಮನೆ ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಕಾನೂನುಬದ್ಧ ನಿಯಮಗಳನ್ನು ಪಾಲಿಸದೇ ಇರುವ ಹಿನ್ನಲೆಯಲ್ಲಿ ಮನೆಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಬಾಗಲೂರು ಪೊಲೀಸ್ ಠಾಣೆಗೆ ವರದಿಯನ್ನು ಸಲ್ಲಿಸಲಾಗಿದೆ.


ಬಂಧಿತ ವಿದೇಶಿ ಮೂಲದ ವ್ಯಕ್ತಿಯು ೨೦೧೭ರಲ್ಲಿ ಬ್ಯೂಸಿನೆಸ್ ವೀಸಾ ಪಡೆದು ಶ್ರೀಲಂಕಾದ ಮೂಲಕ ಭಾರತಕ್ಕೆ ಬಂದಿದ್ದು, ವೀಸಾ ಅವಧಿಯು ಮುಗಿದ ನಂತರವೂ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಸವಾಗಿದ್ದುಕೊಂಡು ಜೀವನ ನಿರ್ವಹಣೆಗಾಗಿ ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿಕೊಂಡಿದ್ದನು.


ಈತನ ವಿರುದ್ಧ ೨೦೧೯ನೇ ಸಾಲಿನಲ್ಲಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣದಲ್ಲಿ ಆತನು ಜೈಲಿಗೆ ಹೋಗಿ ಬಂದಿದ್ದು, ನಂತರ ಮತ್ತೆ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿಕೊಂಡಿದ್ದರಿಂದ ೨೦೨೦ನೇ ಸಾಲಿನಲ್ಲಿ ಕೋಣನಕುಂಟೆ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು..


ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಡಿಸಿಪಿ ರಾಜಾ ಇಮಾಮ್ ಖಾಸೀಂ ಅವರ ಮಾರ್ಗದರ್ಶನದಲ್ಲಿ ಇನ್ಸ್ ಪಕ್ಟರ್ ಮಂಜಪ್ಪ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.