
ಯಾದಗಿರಿ:ಫೆ.20: ಜಿಲ್ಲಾ ಕೇಂದ್ರವಾದ ಯಾದಗಿರಿ ನಗರದಲ್ಲಿ ಸಮಗ್ರ ನಗರಾಭಿವೃದ್ಧಿಗೆ ದಿಕ್ಕುನೀಡುವ ಮಾಸ್ಟರ್ ಪ್ಲಾನ್ ರೂಪಿಕರಣ ಕಾರ್ಯಕ್ಕೆ ಡ್ರೋನ್ ಸರ್ವೆ ಮೂಲಕ ಅಧಿಕೃತ ಚಾಲನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಂಒಖUಖಿ 2.0 (ಅಮೃತ್ 2.0) ಯೋಜನೆಯಡಿ ಈ ಮಹತ್ವದ ಕಾರ್ಯ ಮಂಗಳವಾರ ಇಲ್ಲಿನ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಆರಂಭವಾಯಿತು.
ಕಾರ್ಯಕ್ರಮಕ್ಕೆ ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್ ಚಾಲನೆ ನೀಡಿ ಮಾತನಾಡಿ, ನಗರಾಭಿವೃದ್ಧಿಯ ದೀರ್ಘಾವಧಿ ದೃಷ್ಟಿಕೋಣದೊಂದಿಗೆ ಮಾಸ್ಟರ್ ಪ್ಲಾನ್ ಜಾರಿಗೊಳ್ಳಲಿದೆ ಎಂದು ತಿಳಿಸಿದರು. ಡ್ರೋನ್ ತಂತ್ರಜ್ಞಾನ ಬಳಸಿ ನಗರ ವ್ಯಾಪ್ತಿಯ ಸಂಪೂರ್ಣ ಭೂಮಾಪನ ಮತ್ತು ಸರ್ವೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸಮಗ್ರ ಮಾಹಿತಿ ಆಧಾರಿತ ಯೋಜನೆ ರೂಪಿಸಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ ಚವ್ಹಾಣ ಮಾತನಾಡಿ, ಅಮೃತ್ 2.0 ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅದರ ಮಾರ್ಗಸೂಚಿಗಳ ಪ್ರಕಾರವೇ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯಲಿವೆ ಎಂದು ಹೇಳಿದರು. ಡ್ರೋನ್ ಸರ್ವೆ ಕಾರ್ಯಕ್ಕೆ ಈಗಾಗಲೇ ತಜ್ಞರ ಹಾಗೂ ಅಧಿಕಾರಿಗಳ ತಂಡ ಆಗಮಿಸಿದ್ದು, ಹಂತ ಹಂತವಾಗಿ ನಗರ ಪ್ರದೇಶದ ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ನಗರ ಯೋಜನಾ ಸದಸ್ಯ ಶರಣಪ್ಪ, ಸಿಬ್ಬಂದಿಗಳಾದ ಇಂದೂಶೇಖರ ಕಾಡ್ಲೂರ್, ಎಂ.ಡಿ. ಫಯುಮೋದ್ದಿನ್, ಎಂ.ಡಿ. ಮಹಿಮುದ್ ಅಲಿ, ಭಾಗ್ಯಜ್ಯೋತಿ, ರೂಪಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಗರದ ಭವಿಷ್ಯ ಅಭಿವೃದ್ಧಿಗೆ ಪೂರಕವಾಗುವ ಮಾಸ್ಟರ್ ಪ್ಲಾನ್ ಕಾರ್ಯಕ್ಕೆ ಡ್ರೋನ್ ಸರ್ವೆ ಚಾಲನೆ ನೀಡಿರುವುದು ನಗರಾಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.






















