ನೈಜತೆಯಿಂದ ಕೂಡಿದ ನಾಟಕ ಕಲೆ ಅತ್ಯಂತ ಶ್ರೇಷ್ಠ: ನಾಗರಾಳ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.೨೧:ನಾಟಕಗಳು ಸಮಾಜದ ಪ್ರತಿಬಿಂಬ, ನೈಜತೆಯಿಂದ ಕೂಡಿದ ನಾಟಕ ಕಲೆ ಅತ್ಯಂತ ಶ್ರೇಷ್ಠವಾದದ್ದು. ನಾಟಕಕ್ಕೆ ಸಮಾಜವನ್ನು ತಿದ್ದುವ ಶಕ್ತಿ ಇದೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಕಾಯಕ ಪ್ರಿಯ ಶಿವಾನಂದ ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ತಾನಾಜಿ ನಾಗರಾಳ ಹೇಳಿದರು.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮಜರೆಕೊಪ್ಪ ಗ್ರಾಮದಲ್ಲಿ ನಡೆದ ಜಗನ್ಮಾತೆ ಚಿನವಾಲ ಕೊಪ್ಪದ ದಾಳಮ್ಮದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಪ್ರೊ, ಎ. ಎಚ್. ಕೊಳಮಲಿ ಮಾತನಾಡಿ, ತಂತ್ರಜ್ಞಾನಿಕ ಹಾಗೂ ವೈಜ್ಞಾನಿಕವಾಗಿ ಮುಂದುವರೆದ ಇಂದಿನ ಆಧುನಿಕ ಯುಗದಲ್ಲಿ ನಾಟಕ ಕಲೆಗಳು ಜೀವಂತವಾಗಿ ಉಳಿದಿದೆ ಎಂದರೆ ಅದಕ್ಕೆ ಗ್ರಾಮೀಣ ಭಾಗದ ಕಲಾವಿದರೇ ಕಾರಣ. ಸನ್ನಿವೇಶಕ್ಕೆ ತಕ್ಕಂತೆ ಅಭಿನಯವನ್ನು ಮಾಡಿ ನಾಟಕ ಕಲೆಗೆ ಜೀವ ತುಂಬುವುದು ಪ್ರತಿಯೊಬ್ಬ ಕಲಾವಿದನ ಆದ್ಯ ಕರ್ತವ್ಯವಾಗಿದೆ. ಹಬ್ಬ-ಹರಿದಿನಗಳನ್ನು ಜಾತ್ರಾ ಮಹೋತ್ಸವಗಳನ್ನು ಆಚರಿಸುವುದರಿಂದ ನಮ್ಮ ಮೂಲ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.
ಹಿರಿಯರಾದ ಬಸನಗೌಡ ನರಸನಗೌಡ್ರ ಮಾತನಾಡಿ, ಮಜರೇಕೊಪ್ಪ ಎಂಬ ಚಿಕ್ಕ ಗ್ರಾಮ ಕಲಾವಿದರ ತವರೂರಾಗಿದೆ. ಈ ಗ್ರಾಮದ ನಾಟಕ ಇತರ ಗ್ರಾಮದ ನಾಟಕ ಕಲಾವಿದರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಜಾತ್ರಾ ಕಮಿಟಿಯ ಮುಖ್ಯಸ್ಥ ಪ್ರಭು ಕೊಳಮಲಿ ಮಾತನಾಡಿ, ನಾಟಕವು ಮನರಂಜನೆಯ ಜೊತೆಗೆ ಒಳ್ಳೆಯ ಜ್ಞಾನ ಹಾಗೂ ಸಂಸ್ಕಾರವನ್ನು ತಿಳಿಸಿಕೊಡುತ್ತದೆ. ನಾಟಕದಲ್ಲಿ ಬರುವ ಕೆಟ್ಟ ವಿಚಾರವನ್ನು ಬಿಟ್ಟು ಒಳ್ಳೆಯ ವಿಚಾರವನ್ನು ಸ್ವೀಕಾರ ಮಾಡಿಕೊಂಡು ಉತ್ತಮ ಗುಣವನ್ನು ಹೊಂದಬೇಕೆAದು ಹೇಳಿದರು.
ದಾಳಮ್ಮದೇವಿಯ ಆರಾಧಕರಾದ ಶ್ರೀ ಮರಳುಸ್ವಾಮಿ ಕೊಳಮಲಿ, ಶ್ರೀ ಬಸಪ್ಪ ಕಂಬಳಿ, ಮಲ್ಲು ಪವಾರ, ಬಸವರಾಜ ನಿಡಗುಂದಿ, ಯಲ್ಲಪ್ಪ ಗೊಬಗೊಡಿ, ಹನಮಂತ. ದ, ಕೊಳಮಲಿ, ಮಹಾದೇವಪ್ಪ ಕೊಳಮಲಿ, ಶ್ರೀಶೈಲ ಕಂಬಳಿ, ಯಮನೂರಿ ಹಂಡಿ, ಲಕ್ಷ್ಮಣ ಚಲಗೊಂಡ, ಹಣಮಂತ ಮಾಕಾಳಿ ಉಪಸ್ಥಿತರಿದ್ದರು.
ರಾಮಸ್ವಾಮಿ ಕೊಳಮಲಿ ಸ್ವಾಗತಿಸಿದರು, ಪರಸಪ್ಪ ಕೊಳಮಲಿ ನಿರೂಪಿಸಿದರು.