‘ಮಹಾಬ್ರಾಹ್ಮಣ ಪ್ರಚಂಡ ರಾವಣ’ ನಾಟಕ ಪ್ರದರ್ಶನ

ಕೋಲಾರ.ಜು,೪- ಉತ್ತರ ಕನ್ನಡದ ಶಿರಳಿಗೆಯ ಶ್ರೀಚೈತನ್ಯರಾಜರಾಮಕ್ಷೇತ್ರದ ಪಾಕಶಾಲೆ ಮತ್ತು ಭೋಜನ ಶಾಲೆಯ ಸಹಾಯಾರ್ಥವಾಗಿ ನಗರದ ರಂಗಮಂದಿರದಲ್ಲಿ ‘ಮಹಾಬ್ರಾಹ್ಮಣ ಪ್ರಚಂಡ ರಾವಣ’ ನಾಟಕ ಆಯೋಜಿಸಲಾಗಿತ್ತು.


ಬಿಳಿಗಿರಿ ರಂಗನಾಥ ವೇದಪಾಠಶಾಲೆ ಟ್ರಸ್ಟ್ ನ ವಿದ್ಯಾರ್ಥಿಗಳಿಂದ ಮೂಡಿಬಂದ ಈ ನಾಟಕವು ಕುಣಿಗಲ್ ಪ್ರಭಾಕರ ಶಾಸ್ತ್ರಿಯಿಂದ ರಚಿಸಿದ್ದು, ಮುಡಿಯನೂರಿನ ಹೆಚ್. ಎಸ್. ನಾಗರಾಜ ಶ್ರೌತಿ ನಿರ್ದೇಶಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಕೋಲಾರ ಶೃಂಗೇರಿ ಶ್ರೀಶಂಕರ ಮಠದ ಧರ್ಮಾಧಿಕಾರಿ ಜೆ. ಎನ್ ರಾಮಕೃಷ್ಣ, ನಗರದಲ್ಲಿ ಶ್ರೀಬ್ರಹ್ಮಾನಂದ ಭಾರತೀ ಸ್ವಾಮಿಗಳು ನಡೆಸಿಕೊಟ್ಟು ಜ್ಞಾನಸತ್ರಗಳನ್ನು ನೆನೆಪಿಸಿದರು.


ಸ್ವಾಮಿಗಳಿಂದ ನಮ್ಮೇಲ್ಲರ ಆತ್ಮೋನ್ನತಿಗಾಗಿ ತರಗತಿಗಳನ್ನು ಆಶ್ರಮದಲ್ಲಿ ನಡೆಸಲು ವಸತಿ, ಭೋಜನಾದಿಗಳ ಅನುಕೂಲಕ್ಕೆ ಶಿಷ್ಯರ ಅಪೇಕ್ಷೆಯಂತೆ ವಿವಿಧ ಕಟ್ಟಡ ಕಾಮಗಾರಿಗಳು ಕೈಗೆತ್ತಿಕೊಂಡಿದ್ದಾರೆ. ಅದರ ಸಲುವಾಗಿ ವಿವಿಧ ದಾನಿಗಳಿಂದ ದೇಣಿಗೆ ಸ್ವೀಕರಿಸಲಾಗುತ್ತಿದೆ. ಪ್ರಸ್ತುತ ಬಿಳಿಗಿರಿ ರಂಗನಾಥ ವೇದಪಾಠಶಾಲೆಯ ವಿದ್ಯಾರ್ಥಿಗಳು ಗುರುಸೇವೆಗಾಗಿ ಬಣ್ಣತೊಟ್ಟು ತಮ್ಮ ಕಲೆಯನ್ನು ಪೌರಾಣಿಕ ನಾಟಕದ ಮೂಲಕ ನಮ್ಮೆಲ್ಲರ ಮುಂದಿರಿಸಿ, ಸಂಗ್ರಹವಾದ ಹಣವನ್ನು ಗುರುಪದತಲಗಳಲ್ಲಿ ಸರ್ಮಪಿಸುತ್ತಿರುವುದು ಅತ್ಯಂತ ಹರ್ಷದ ವಿಚಾರವಾಗಿದ್ದು, ಎಲ್ಲಾ ಸಹೃದಯಿಗಳು ಈ ಮಹತ್ತರ ಕಾರ್ಯಕ್ಕೆ ಸಹಾಯ ನೀಡಲು ಕೋರಿದರು.


ಸುಮಾರು ಎರಡು ಗಂಟೆಗಳು ನಡೆದ ಈ ಪೌರಾಣಿಕ ನಾಟಕ ಅತ್ಯಂತ ಚೆನ್ನಾಗಿ ಮೂಡಿಬಂದು, ಭಾಗವಹಿಸಿದ್ದ ಎಲ್ಲ ಕಲಾಭಿಮಾನಿಗಳ ಮನಸೂರೆಗೊಂಡಿತು. ಹದಿನಾಲ್ಕು ಪಾತ್ರಧಾರಿಗಳ ಈ ನಾಟಕ ತಂಡದ ಪರಿಚಯವನ್ನು ವಿಜಯರತ್ನ ಮಾಡಿಕೊಟ್ಟರು. ಕಾರ್ಯಕ್ರಮದ ಉಸ್ತುವಾರಿಯನ್ನು ಹೆಚ್. ಉದಯ ಕುಮಾರ್, ಎಂ.ಪಿ.ಆನಂದ್, ಕೆ.ಎನ್ ರಮೇಶ್ ಮತ್ತಿತ್ತರರು ವಹಿಸಿದ್ದರು.