
ಕಲಬುರಗಿ : ಸುಮಾರು ಇಪ್ಪತ್ತು ವರ್ಷಗಳಿಂದ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಡಾ.ಸುರೇಶಕುಮಾರ ನಂದಗಾಂವ ಅವರು ಶನಿವಾರ ವೃತ್ತಿಯಿಂದ ನಿವೃತ್ತರಾದರು.
ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕದ ಅನೇಕರ ಬಾಳಿಗೆ ಬೆಳಕು ನೀಡಿದವರು. ಈ ಭಾಗದಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ನೆಟ್ಟ ಶಿಕ್ಷಣವೆಂಬ ಸಸಿಯನ್ನು ಹೆಮ್ಮರವಾಗಿ ಬೆಳೆಸಿದ ಪೂಜ್ಯ ಡಾ.ಅಪ್ಪ ಅವರು ಶಿಕ್ಷಣದ ಜೊತೆಗೆ ಅನೇಕರನ್ನು ಶಿಕ್ಷಕರನ್ನಾಗಿ ಮಾಡಿ ಅವರಿಗೆ ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಬೆಳೆಯಲು ಕಾರಣಕರ್ತರಾದರು. ಅನೇಕ ಶಿಕ್ಷಕರಿಗೆ ತಿದ್ದಿ ತಿಡಿ ಉತ್ತಮ ಶಿಕ್ಷಕರಾಗಿ ರೂಪುಗೊಳಿಸಿದರು. ಡಾ.ಸುರೇಶಕುಮಾರ ನಂದಗಾಂವ ಅವರು ಉತ್ತಮ ಶಿಕ್ಷಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು ಎಂದು ಹೇಳಿದರು.
ಡಾ. ರಾಮಕೃಷ್ಣರೆಡ್ಡಿ, ಡಾ.ಶ್ರೀಶೈಲ ಬಿರಾದಾರ, ಪ್ರೊ.ವೆಂಕಣ್ಣ ಡೊಣ್ಣೆಗೌಡರ, ಪ್ರೊ. ಶ್ರೀದೇವಿ ಹರವಾಳ, ಡಾ. ಶಿವರಾಜ ಶಾಸ್ತ್ರಿ ಹೇರೂರ್ ಮತ್ತಿತರರು ಮಾತನಾಡಿದರು. ಡಾ.ಆರತಿ ರಾಮಚಂದ್ರ ಸ್ವಾಗತಿಸಿದರು. ಡಾ.ಸುನಿತಾ ಮೂಲಗೆ, ಪ್ರೊ.ಹೆಬ್ಸಿಬಾ ನಿರೂಪಿಸಿದರು. ವೇದಿಕೆ ಮೇಲೆ ಶ್ರೀಮತಿ ಅನುಸೂಯಾ ನಂದಗಾಂವ ಮತ್ತು ಮಹಾವಿದ್ಯಾಲಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಯರು ಉಪಸ್ಥಿತರಿದ್ದರು.


















